ಕನ್ನಡದ ಜನಪ್ರಿಯ ನಿರ್ದೇಶಕ ಮತ್ತು ನಟ ಜೋಗಿ ಪ್ರೇಮ್ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಯೊಬ್ಬ ಅತಿಯಾದ ರೀತಿಯಲ್ಲಿ ಆಚರಿಸಿರುವ ಘಟನೆ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅಭಿಮಾನಿಯೊಬ್ಬನು ತನ್ನ ರಕ್ತವನ್ನು ಇಂಕ್ ಆಗಿ ಬಳಸಿಕೊಂಡು, “ಹ್ಯಾಪಿ ಬರ್ತ್‌ಡೇ ಬಾಸ್” ಎಂದು ಬರೆದು ಚಿತ್ರ ಬಿಡಿಸಿಕೊಂಡಿದ್ದಾನೆ. ತನ್ನ ಪ್ರೀತಿಯ ನಿರ್ದೇಶಕನಿಗೆ ವಿಭಿನ್ನ ಉಡುಗೊರೆ ನೀಡಬೇಕೆಂಬ ಹುಮ್ಮಸ್ಸಿನಿಂದ ಈ ರೀತಿ ವಿಚಿತ್ರವಾಗಿ ನಡೆದುಕೊಂಡಿದ್ದಾನೆ.
ಎಸ್, ಅಕ್ಟೋಬರ್ 22ರಂದು ಜೋಗಿ ಪ್ರೇಮ್ ಹುಟ್ಟುಹಬ್ಬವಾಗಿದ್ದು, ಅದನ್ನು ಸ್ಮರಣೀಯಗೊಳಿಸಲು ಅಭಿಮಾನಿಯೊಬ್ಬ ತನ್ನದೇ ರಕ್ತದಲ್ಲಿ ಬರಹ ಬರೆದು ವಿಡಿಯೋ ರೂಪದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಆ ವೀಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಈ ವಿಡಿಯೋ ನೋಡಿ ಬೇಸರಗೊಂಡ ಪ್ರೇಮ್ ತಮ್ಮದೇ ಗ್ರಾಮೀಣ ಶೈಲಿಯಲ್ಲಿ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. “ಮಕ್ಕಳೇ, ಇಂಥಹ ತಪ್ಪು ಮಾಡಬೇಡಿ. ಪ್ರೀತಿ ತೋರಿಸುವುದು ಒಳ್ಳೇದು, ಆದರೆ ಈ ರೀತಿ ಮಾಡಿದ್ರೆ ಅದು ಅಭಿಮಾನವಲ್ಲ, ಹಾನಿ.”ನಿಮ್ಮ ಪ್ರೀತಿಯನ್ನು ಹೀಗೆ ತೋರಿಸಬೇಡಿ. ರಕ್ತದಲ್ಲಿ ಬರೆಯೋದು, ನೋವು ತಗೊಳ್ಳೋದು ಯಾವುದಕ್ಕೂ ಅರ್ಥವಿಲ್ಲ. ನನಗೆ ಖುಷಿ ಕೊಡೋದಕ್ಕಿಂತ ನೋವು ಕೊಡುತ್ತದೆ ಎಂದರು.
ಇನ್ನೂ ನಿರ್ದೇಶಕ ಪ್ರೇಮ್ ಅವರ ಈ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆಯುತ್ತಿದೆ. “ನಿಜವಾದ ಅಭಿಮಾನ ಅಂದರೆ ಕಲೆಯನ್ನು ಪ್ರೀತಿಸುವುದು, ರಕ್ತ ಸುರಿಸುವುದು ಅಲ್ಲ” ಎಂಬ ಸಂದೇಶ ನೀಡಿರುವ ಪ್ರೇಮ್ ಅವರ ಮಾತುಗಳಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.