ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಇಂದು ಅಸ್ಸಾಂನ ಗುವಾಹಟಿಯಲ್ಲಿ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು. ಇದು ಅಸ್ಸಾಂ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಹೇಳಲಾಗಿದೆ.
ಉದ್ಘಾಟನೆಯ ನಂತರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಂದು ಅಭಿವೃದ್ಧಿಯ ಆಚರಣೆಯ ದಿನ. ಇದು ಅಸ್ಸಾಂ ಮಾತ್ರವಲ್ಲ, ಇಡೀ ಈಶಾನ್ಯ ಭಾರತದ ಅಭಿವೃದ್ಧಿಯ ಆಚರಣೆಯಾಗಿದೆ. ಅಸ್ಸಾಂ ಯಾವ ರೀತಿಯಲ್ಲಿ ಅಭಿವೃದ್ಧಿಯ ಹಬ್ಬವನ್ನು ಆಚರಿಸುತ್ತಿದೆ ಎಂಬುದನ್ನು ಇಡೀ ದೇಶ ನೋಡುತ್ತಿದೆ” ಎಂದು ಹೇಳಿದರು.
ಸುಮಾರು 4,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ನೂತನ ಟರ್ಮಿನಲ್, ಭಾರತದ ಮೊದಲ ಪ್ರಕೃತಿ ಪ್ರೇರಿತ ವಿಮಾನ ನಿಲ್ದಾಣದ ಟರ್ಮಿನಲ್ ಆಗಿದೆ. ಅಸ್ಸಾಂನ ನೈಸರ್ಗಿಕ ಭೂದೃಶ್ಯವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಈ ಟರ್ಮಿನಲ್, ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ.
ಇದರಿಂದ ಅಸ್ಸಾಂ ಹಾಗೂ ನೆರೆಯ ರಾಜ್ಯಗಳ ಸಂಪರ್ಕ ವ್ಯವಸ್ಥೆ ಸುಧಾರಿಸುವುದರೊಂದಿಗೆ ಪ್ರವಾಸೋದ್ಯಮ, ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.



