ಮಂಗಳೂರು: ಬೆಂಗಳೂರು ರಾಜಕೀಯದ ಬಿಸಿ ಕರಾವಳಿಗೂ ತಟ್ಟಿದ್ದು, ಎಐಸಿಸಿ ನಾಯಕ ಕೆ.ಸಿ. ವೇಣುಗೋಪಾಲ್ ಎದುರೇ ಡಿಕೆಶಿ ಪರ ಘೋಷಣೆಗಳು ಮೊಳಗಿವೆ. ಹೌದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ, ಕಾಂಗ್ರೆಸ್ ಕಾರ್ಯಕರ್ತರಿಂದ ಡಿ.ಕೆ. ಶಿವಕುಮಾರ್ ಪರ ಘೋಷಣೆಗಳು ಕೇಳಿಬಂದವು.
ವೇಣುಗೋಪಾಲ್ ಮಂಗಳೂರಿನಲ್ಲಿ ನಡೆಯಲಿರುವ ಗಾಂಧೀಜಿ–ನಾರಾಯಣ ಗುರು ಸಂವಾದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸುವ ಹಿನ್ನೆಲೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಜಮಾಯಿಸಿಕೊಂಡಿದ್ದರು. ಅವರು ಆಗಮಿಸುತ್ತಿದ್ದಂತೆ “ಡಿ.ಕೆ., ಡಿ.ಕೆ.” ಎಂಬ ಘೋಷಣೆಗಳನ್ನು ಕೂಗಿದರು.ಸಿಎಂ ಬದಲಾವಣೆ ಬಗ್ಗೆ ಮಾಧ್ಯಮದವರು ಪ್ರಶ್ನಿಸಲು ಪ್ರಯತ್ನಿಸಿದರೂ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯಿಸಲು ನಿರಾಕರಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿ ಅವರ ನಡುವೆ 1924ರಲ್ಲಿ ನಡೆದ ಐತಿಹಾಸಿಕ ‘ವರ್ಕಲ ಶಿವಗಿರಿ ಸಂವಾದ’ಕ್ಕೆ ಈಗ ಶತಮಾನದ ವರ್ಷ. ‘ಗುರು- ಗಾಂಧಿ’ಯವರ ಸಂವಾದದ ಮೌಲ್ಯಗಳನ್ನು ಮತ್ತೆ ನೆನಪಿಸುವ ಆಶಯದಿಂದ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ‘ಶತಮಾನದ ಮಹಾಪ್ರಸ್ಥಾನ’ ಕಾರ್ಯಕ್ರಮ ನಡೆಯಲಿದೆ.



