ಬೆಂಗಳೂರು: ವಾರದ ದಿನಗಳಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ, ವಾರಾಂತ್ಯದಲ್ಲಿ ಖತರ್ನಾಕ್ ಕಳ್ಳಿಯಾಗಿ ಬದಲಾಗುತ್ತಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳಿಗೆ ಸಂಬಂಧಿಕಳಂತೆ ಪ್ರವೇಶಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ಪ್ರೊಫೆಸರ್ ರೇವತಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಶಿವಮೊಗ್ಗ ಮೂಲದ ರೇವತಿ ಬೆಂಗಳೂರಿನ ಕೆ.ಆರ್. ಪುರಂನಲ್ಲಿ ವಾಸವಾಗಿದ್ದು, ಬೆಳ್ಳಂದೂರು ಬಳಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ವಾರಪೂರ್ತಿ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಈಕೆ, ಭಾನುವಾರ ಮಾತ್ರ ಮದುವೆ ಕಲ್ಯಾಣ ಮಂಟಪಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದಳು.
ಸಂಬಂಧಿಕಳಂತೆ ಮದುವೆ ಮನೆಯಲ್ಲಿ ಎಲ್ಲರೊಂದಿಗೆ ಮಾತನಾಡುತ್ತಾ ಅನುಮಾನ ಬಾರದಂತೆ ವರ್ತಿಸುತ್ತಿದ್ದ ರೇವತಿ, ಚಿನ್ನಾಭರಣ ಕದಿದು ಬಳಿಕ ಮದುವೆ ಊಟ ಕೂಡ ಮಾಡಿ ಅಲ್ಲಿಂದ ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ನವೆಂಬರ್ 25ರಂದು ಬಸವನಗುಡಿಯ ದ್ವಾರಕನಾಥ್ ಕಲ್ಯಾಣ ಮಂಟಪದಲ್ಲಿ ಸಂಬಂಧಿಕಳಂತೆ ತೆರಳಿ ಮದುವೆ ಮನೆಯವರ ಚಿನ್ನಾಭರಣ ಕದ್ದಿದ್ದಳು. ಭಾನುವಾರಗಳಂದು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮದುವೆ ನಡೆಯುತ್ತಿದ್ದ ಹಾಲ್ಗಳಿಗೆ ಭೇಟಿ ನೀಡುತ್ತಿದ್ದಳು.
ಬಸವನಗುಡಿ ಪೊಲೀಸರ ವಿಚಾರಣೆ ವೇಳೆ ರೇವತಿ ಮೂರು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಬಂಧಿತಳಿಂದ ಸುಮಾರು 32 ಲಕ್ಷ ರೂ. ಮೌಲ್ಯದ 262 ಗ್ರಾಂ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಬೇರೆ ಬೇರೆ ಕಲ್ಯಾಣ ಮಂಟಪಗಳಲ್ಲಿ ಇದೇ ರೀತಿಯ ಕೃತ್ಯ ಎಸಗಿರುವ ಶಂಕೆ ಇದ್ದು, ಪೊಲೀಸರು ಆಕೆಯನ್ನು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.



