ಬೆಂಗಳೂರು: ನಗರದ ಪಿಇಎಸ್ ವಿಶ್ವವಿದ್ಯಾಲಯನಲ್ಲಿ ಪ್ರೊಫೆಸರ್ ವಿರುದ್ಧ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಅವರನ್ನು ಸೇವೆಯಿಂದ ವಜಾಗೊಳಿಸಿದೆ..
ಬಿಬಿಎ ಅನಾಲಿಟಿಕ್ಸ್ ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ, ಅರೆಕಾಲಿಕ ಪ್ರಾಧ್ಯಾಪಕ ಡಾ. ಮುರುಳೀಧರ ದೇಶಪಾಂಡೆ ಅವರು ಒಬ್ಬ ವಿದ್ಯಾರ್ಥಿಯನ್ನು ಪದೇಪದೇ “ಭಯೋತ್ಪಾದಕ” ಎಂದು ಕರೆದಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ, “ನಿಮ್ಮಂತಹವರಿಂದಲೇ ಇರಾನ್ ಯುದ್ಧ ನಡೆದಿದೆ” ಹಾಗೂ “ಟ್ರಂಪ್ ನಿನ್ನನ್ನು ಕರೆದುಕೊಂಡು ಹೋಗುತ್ತಾರೆ” ಎಂಬ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಈ ಘಟನೆ ಸುಮಾರು 60 ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಆಡಳಿತವು ಪ್ರಾಧ್ಯಾಪಕರನ್ನು ಅಮಾನತುಗೊಳಿಸಿದೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಿಸಲಾಗಿದೆ.
ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆ ದೂರು ನೀಡಿದ್ದು, ವಿದ್ಯಾರ್ಥಿ ಅಧಿಕೃತ ದೂರು ನೀಡಲು ಸಮಯ ಕೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಅವರು, ಮುಂದಿನ ಕ್ರಮವನ್ನು ವಿಶ್ವವಿದ್ಯಾಲಯದ ವರದಿ ಆಧರಿಸಿ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ, ನೆಲಮಂಗಲ ಸಮೀಪದ ಟಿ. ಬೇಗೂರು ಪ್ರದೇಶದ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರೊಬ್ಬರು ತರಗತಿಯಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ವಿಡಿಯೋ ಕೂಡ ಇತ್ತೀಚೆಗೆ ವೈರಲ್ ಆಗಿತ್ತು. ಆ ಪ್ರಕರಣದಲ್ಲಿಯೂ ಅಸಭ್ಯ ವರ್ತನೆ ಆರೋಪದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.



