ಬೆಂಗಳೂರು: ತೆರಿಗೆ ವಸೂಲಿ ವಿಚಾರದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕೈಗೊಂಡಿರುವ ಕ್ರಮ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಡ್ರೋನ್ ಸರ್ವೆ ಮೂಲಕ ಹೆಚ್ಚುವರಿ ಆಸ್ತಿ ತೆರಿಗೆ ವಸೂಲಿಗೆ ಜಿಬಿಎ ಮುಂದಾಗಿದ್ದು, ಕಟ್ಟಡದ ಬಾಲ್ಕನಿ, ಕಿಟಕಿ ಮೇಲಿನ ಸಜ್ಜೆ, ವಾಟರ್ ಟ್ಯಾಂಕ್ ಸ್ಟ್ಯಾಂಡ್, ಕಾರ್ ಪಾರ್ಕಿಂಗ್, ಪೋರ್ಟಿಕೋ, ಮನೆ ಮುಂದಿನ ತಾತ್ಕಾಲಿಕ ಗಜಿಬೋ ಸೇರಿದಂತೆ ಮನೆಗೆ ಸಂಬಂಧಿಸಿದ ಪೂರಕ ಕಟ್ಟಡಗಳಿಗೂ ತೆರಿಗೆ ವಿಧಿಸಲಾಗಿದೆ.
ಈವರೆಗೆ ಅಂದಾಜು 46 ಸಾವಿರ ಮನೆ ಮಾಲೀಕರಿಂದ ಹೆಚ್ಚುವರಿ ತೆರಿಗೆ ವಸೂಲಿಗೆ ಜಿಬಿಎ ಮುಂದಾಗಿದ್ದು, 5 ಲಕ್ಷದಿಂದ 18 ಲಕ್ಷ ರೂಪಾಯಿವರೆಗೆ ಹೆಚ್ಚುವರಿ ತೆರಿಗೆ ಪಾವತಿಸುವಂತೆ ಮೆಸೇಜ್ ಮೂಲಕ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮೆಸೇಜ್ ತೆರೆಯುವುದನ್ನು ನೋಟಿಸ್ ಸ್ವೀಕರಿಸಿದಂತೆ ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಹೆಚ್ಚುವರಿ ತೆರಿಗೆ ಪ್ರಶ್ನಿಸಿದ ಮನೆಗಳನ್ನು ಹರಾಜು ಮಾಡಲು ಕೂಡಾ ಪ್ರಾಧಿಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ 17 ಮನೆಗಳ ಹರಾಜು ಪ್ರಕ್ರಿಯೆಗೆ ಅಂತಿಮ ನೋಟಿಸ್ ನೀಡಲಾಗಿದೆ.
ಐದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 46 ಸಾವಿರ ಜನರಿಗೆ ನೋಟಿಸ್ ನೀಡಿರುವ ಜಿಬಿಎ ಕ್ರಮವನ್ನು ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಪ್ರಶ್ನಿಸಿದ್ದಾರೆ. ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಡ್ರೋನ್ ಸರ್ವೆ ನಡೆಸಿ ಬೆಂಗಳೂರಿನಲ್ಲಿ ಮನೆಗಳಿಗೆ ಹೆಚ್ಚುವರಿ ತೆರಿಗೆ ಹಾಗೂ ದಂಡ ವಿಧಿಸಲಾಗುತ್ತಿದೆ. ಕೆಲವು ಮನೆಗಳಿಗೆ 7-8 ಲಕ್ಷದಿಂದ 30 ಲಕ್ಷ ರೂಪಾಯಿವರೆಗೆ ತೆರಿಗೆ ಹಾಗೂ ದಂಡ ವಿಧಿಸಲಾಗಿದೆ ಎಂದು ಆರೋಪಿಸಿದರು.
ಈ ಹೇಳಿಕೆಗೆ ಧ್ವನಿಗೂಡಿಸಿದ ಶಾಸಕ ಸುರೇಶ್ ಕುಮಾರ್, ಇದು ಆಸ್ತಿ ತೆರಿಗೆ ಭಯೋತ್ಪಾದನೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕ್ರಮವನ್ನು ಹಿಂಪಡೆಯುವಂತೆ ಆಗ್ರಹಿಸಿದರು.
ಬಿಜೆಪಿ ಶಾಸಕರ ಆರೋಪಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ನಾವು ಡ್ರೋನ್ ಸರ್ವೇ ಆಧರಿಸಿ ಯಾವುದೇ ನೋಟಿಸ್ ನೀಡುತ್ತಿಲ್ಲ. ಆದರೆ ಡ್ರೋನ್ ಮೂಲಕ ಮನೆಗಳ ಸರ್ವೆ ಕಾರ್ಯ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮೊದಲು ಸೆಲ್ಫ್ ಅಸೆಸ್ಮೆಂಟ್ ಸ್ಕೀಂ ತಂದವನು ನಾನು. ಒನ್ ಟೈಮ್ ಸೆಟ್ಲ್‌ಮೆಂಟ್ ಸ್ಕೀಂ ಕೂಡ ನೀಡುತ್ತಿದ್ದೇವೆ. ಯಾರಿಗಾದರೂ ಸಮಸ್ಯೆ ಇದ್ದರೆ ಅರ್ಜಿ ಸಲ್ಲಿಸಲಿ, ಪರಿಶೀಲಿಸಿ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.



