ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸಮೃದ್ಧ ಬದುಕು ರೂಪುಗೊಳ್ಳಲು ಶರಣರ ವಚನಗಳು ಸಹಕಾರಿಯಾಗಿವೆ ಎಂದು ಗದಗ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೆಜು ಉಪನ್ಯಾಸಕಿ ಕಸ್ತೂರಿ ದಳವಾಯಿ ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿಗಳ ಗವಿಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪುರಾಣ ಪ್ರವಚನದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪುರಾಣ, ಪ್ರವಚನ, ಧ್ಯಾನ, ಸಂಗಿತ ಹಾಗೂ ಶಿವನ ಆರಾಧನೆಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಸಮೃದ್ಧವಾದ ಬದುಕು ಕಟ್ಟಿಕೊಳ್ಳಲು ಸಾಧ್ಯ. ವಿಭೂತಿ ಹಾಗೂ ಕುಂಕುಮ ನಮ್ಮ ಭಾರತೀಯ ಸಂಸ್ಕೃತಿಯ ಪ್ರತಿಕವಾಗಿದೆ. ವಿಭೂತಿ ಧಾರಣೆಯಿಂದ, ಕುಂಕುಮ ಧಾರಣೆಯಿಂದ ದುಷ್ಟ ಶಕ್ತಿಗಳು ಹತ್ತಿರ ಸುಳಿಯುವುದಿಲ್ಲ. ನಿತ್ಯವೂ ಮಕ್ಕಳು ಸಂತರ, ಶರಣರ ಚವನಗಳನ್ನು ಪಠಿಸುವಂತಾಗಬೇಕು. ನಿತ್ಯ ಶರಣರ ತತ್ವದಲ್ಲಿ ಸಾಗಿದಾಗ ಬದುಕು ಸಮೃದ್ಧಿಯಾಗುತ್ತದೆ ಎಂದರು.
ಪ್ರವಚನಕಾರ ಪಿ.ಎಸ್. ಮರಿದೇವರಮಠ ಪುರಾಣ ಪ್ರವಚನ ಮಾಡಿದರು. ಶಂಕ್ರಣ್ಣ ಮಡ್ಡಿ ಸಂಗೀತ ಸೇವೆಗೈದರು. ವಿಜಯಲಕ್ಷ್ಮೀ ಹಿರೇಮಠ, ಮಲ್ಲಪ್ಪ ಬಳ್ಳಾರಿ, ಹೇಮಂತ ಹಿರೇಮಠ ಇದ್ದರು.