ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಎಬಿವಿಪಿಯಿಂದ ಪ್ರತಿಭಟನೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕೆಎಸ್‌ಆರ್ಟಿಸಿ ಬಸ್ ಟಿಕೆಟ್ ದರವನ್ನು ಅವೈಜ್ಞಾನಿಕವಾಗಿ ಏರಿಸಿರುವುದನ್ನು ವಿರೋಧಿಸಿ ಸೋಮವಾರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಷೇಕ ಉಮಚಗಿ ಮಾತನಾಡಿ, ರಾಜ್ಯ ಸರ್ಕಾರ ಏರಿಸಬೇಕಾಗಿದ್ದು ಬಸ್ ಟಿಕೇಟ್ ದರವನ್ನಲ್ಲ, ಬದಲಿಗೆ ಬಸ್‌ಗಳ ಸಂಖ್ಯೆಯನ್ನು. ಬಸ್ಸಿನ ಕೊರತೆಯಿಂದ ನಿತ್ಯ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ, ಸ್ಕಾಲರ್‌ಶಿಪ್ ಬಂದಿಲ್ಲ. ಇನ್ನೂ ಅನೇಕ ತೊಂದರೆಗಳನ್ನು ಸರಿಪಡಿಸಬೇಕಾಗಿದೆ. ಆದರೆ ಬಸ್ ಟಿಕೆಟ್ ದರ ಏರಿಸಿ ಜನರಿಗೆ ಹೊರೆ ಮಾಡುತ್ತಿದೆ.

ದರ ಏರಿಕೆಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ವಾಸುದೇವ ಸ್ವಾಮಿ ಮನವಿ ಸ್ವೀಕರಿಸಿ ಸರಕಾರಕ್ಕೆ ಮನವಿಯನ್ನು ಕಳಿಸುವದಾಗಿ ಹೇಳಿದರು. ಪ್ರತಿಭಟನೆಯಲ್ಲಿ ಪರಿಷತ್‌ನ ಪ್ರಮುಖರಾದ ಪ್ರಕಾಶ ಕುಂಬಾರ, ವಿನಯ್ ಸಪಡ್ಲ, ಅಭಿಷೇಕ ಉಮಚಗಿ, ಯಶವಂತ ಶಿರಹಟ್ಟಿ, ಮನೋಜ್ ತಂಡಗೇರ, ವಿನಾಯಕ ಕುಂಬಾರ, ಅಭಿಷೇಕ ಇಸನಗೌಡರ್, ವಿನಾಯಕ ಹುಂಬಿ, ಅರವಿಂದ ಇಚಾಂಗಿ, ಯುವರಾಜ ದುರ್ಗದ, ಈರಣ್ಣ ಕುಂಬಾರ, ಕಿರಣ ಗುಡಗೇರಿ ಸೇರಿದಂತೆ ಕಾರ್ಯಕರ್ತರು, ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತಿಭಟನೆಯಿಂದ ಕೆಲ ಹೊತ್ತು ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸಮಸ್ಯೆ ಉಂಟಾಯಿತು. ಪಿಎಸ್‌ಐ ನಾಗರಾಜ ಗಡದ, ಅಪರಾಧ ವಿಭಾಗದ ಪಿಎಸ್‌ಐ ರಾಠೋಡ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.


Spread the love

LEAVE A REPLY

Please enter your comment!
Please enter your name here