ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಕ್ಕುಪತ್ರ (ಪಟ್ಟಾಬುಕ್)ನಲ್ಲಿ ಅಳತೆ ಲೋಪವನ್ನು ತಿದ್ದುಪಡಿ ಮಾಡಿ ಕೊಡುವಂತೆ ಆಗ್ರಹಿಸಿ ಸೋಮವಾರ ಕುಂದ್ರಳ್ಳಿ ತಾಂಡಾದ ನಿವಾಸಿಗಳು ಬಟ್ಟೂರ ಗ್ರಾ.ಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಈ ಕುರಿತು ತಾಂಡಾದ ಮುಖಂಡ ಸಂತೋಷ ರಾಠೋಡ ಮಾತನಾಡಿ, ಕಳೆದ 6 ತಿಂಗಳಿನಿಂದ ಮನೆಗಳ ಪಟ್ಟಾಬುಕ್‌ನಲ್ಲಿ ಉಂಟಾಗಿರುವ ಚಕ್ ಲೋಪದ ತಿದ್ದುಪಡಿಗೆ ಅಲೆದಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. 2 ವರ್ಷದ ಹಿಂದೆ 147 ಆಶ್ರಯ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿತ್ತು. ಅದರಲ್ಲಿ ಚಕ್ ಬಂದಿ ಸರಿಯಾಗಿ ನಮೂದಾಗಿಲ್ಲ. ಈ ಬಗ್ಗೆ ಕಳೆದ 6 ತಿಂಗಳ ಹಿಂದೆ ಶಾಸಕರು, ತಾ.ಪಂ ಇಓ, ಗ್ರಾ.ಪಂ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಇದುವರೆಗೂ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾ ದಿನದೂಡುತ್ತಿದ್ದಾರೆ. ಇದರಿಂದ ಮನೆ ನಿರ್ಮಾಣಕ್ಕೆ ತೊಂದರೆಯಾಗಿದೆ.
ಅಲ್ಲದೇ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರಿ ಸೇವೆ, ಸೌಲಭ್ಯಗಳು ಜನರಿಗೆ ಸರಿಯಾಗಿ ಸಿಗುತ್ತಿಲ್ಲ. ಸಾಮಾನ್ಯ ಜನರ ಕೆಲಸಗಳಾಗುತ್ತಿಲ್ಲ. ಇಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸವೆಂಬಂತಾಗಿದೆ. ಗುತ್ತಿಗೆದಾರರು ಹೇಳಿದಂತೆ ಎಲ್ಲರೂ ಕೇಳುತ್ತಾರೆ. ಆದರೆ ಸಾಮಾನ್ಯ ಜನರ ಗೋಳು ಕೇಳುವರು ಯಾರು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾ.ಪಂ ಇಓ ಕೃಷ್ಣಪ್ಪ ಧರ್ಮರ ಪ್ರತಿಭಟನಾ ನಿರತರ ಸಮಸ್ಯೆ ಆಲಿಸಿ, ಪಿಡಿಓ ಮಲ್ಲೇಶ ಮಾದರ ಹಾಗೂ ಸಿಬ್ಬಂದಿಗಳಿಗೆ 10 ದಿನದಲ್ಲಿ ಈ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಸಮಸ್ಯೆ ಬಗೆಹರಿಸದಿದ್ದರೆ ಸಿಇಓ ಅವರ ಗಮನಕ್ಕೆ ತಂತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದಾಗ ನಿವಾಸಿಗಳು ಪ್ರತಿಭಟನೆಯಿಂದ ಹಿಂದೆ ಸರಿದರು.
ಈ ವೇಳೆ ಮಾನು ಲಮಾಣಿ, ಪ್ರವೀಣ ಲಮಾಣಿ, ಸಂತೋಷ ಪಮ್ಮಾರ, ರಮೇಶ ಲಮಾಣಿ, ಮಂಜು ಲಮಾಣಿ, ಉಮೇಶ ಲಮಾಣಿ, ಭೋಜಪ್ಪ ಕಾರಬಾರಿ, ರಮೇಶ ಪಮ್ಮಾರ, ಪ್ರಕಾಶ ಪಮ್ಮಾರ, ಸಂತೋಷ ಲಮಾಣಿ, ಈಶ್ವರ ಲಮಾಣಿ, ರವಿ ಲಮಾಣಿ, ಕುಬೇರ ಲಮಾಣಿ ಸೇರಿ ಕುಂದ್ರಳ್ಳಿ ತಾಂಡಾದ ನಿವಾಸಿಗಳಿದ್ದರು.