ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಅಗಸ್ತ್ಯ ತೀರ್ಥದ ಬಳಿ ಇರುವ ಮುಕ್ತಿಧಾಮದಲ್ಲಿ ಅವಶ್ಯವಿರುವ ಮೂಲಭೂತ ಸೌಲಭ್ಯಗಳು ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಪುರಸಭೆಯಿಂದ ಅನುದಾನ ಒದಗಿಸುವಂತೆ ಲಕ್ಷ್ಮೇಶ್ವರ ಮುಕ್ತಿಧಾಮ ಸಂಘದವರು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ವಿ.ಎಲ್. ಪೂಜಾರ, ಹಲವು ವರ್ಷಗಳಿಂದ ಅಗಸ್ತ್ಯ ತೀರ್ಥದ ಬಳಿ ಮುಕ್ತಿಧಾಮವಿದ್ದು, ಇದರಲ್ಲಿ ಸುಮಾರು 18-20 ಸಮಾಜದವರು ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಆದರೆ ಅದಕ್ಕೆ ತಕ್ಕಂತೆ ಈ ಸ್ಮಶಾನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಅಂತ್ಯಸಂಸ್ಕಾರಕ್ಕಾಗಿ ಸಿಲಿಕಾನ್ ಚೇಂಬರ್, ಬಂದ ಜನರಿಗೆ ಕುಳಿತುಕೊಳ್ಳಲು ಆಸನಗಳು, ಅಲ್ಲದೆ ಮೂಲಭೂತ ಸೌಲಭ್ಯಗಳಾದ ವಿದ್ಯುತ್, ನೀರು ಇತ್ಯಾದಿಗಳ ಸಮಸ್ಯೆಗಳಿಂದ ಅಲ್ಲಿಗೆ ಬರುವ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸ್ಮಶಾನ ಅಭಿವೃದ್ಧಿಗಾಗಿ ಅನುದಾನವನ್ನು ನೀಡಬೇಕೆಂದು ವಿನಂತಿಸಿದರು.
ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಈ ಕುರಿತಂತೆ ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಪುರಸಭೆ ಸದಸ್ಯರಾದ ರಾಜಣ್ಣ ಕುಂಬಿ, ಬಸವರಾಜ ಓದುನವರ, ರಾಮಪ್ಪ ಗಡದವರ, ರಾಮರಾವ ವೆರ್ಣೆಕರ, ಗಿರೀಶ ಅಗಡಿ, ಕಿರಣ ನವಲೆ, ವೈಭವ ಗೋಗಿ, ವೆಂಕಟೇಶ ಮಾತಾಡೆ, ಪ್ರವೀಣ ಬೋಮಲೆ, ಅಭಯ ಜೈನ್, ಬಾಸ್ಕರ್ ಸೊರಟೂರ, ಆದೇಶ ಬರಿಗಾಲಿ, ಮಹೇಶ ಹುಲಬಜಾರ, ಶಂಕರ ಹಾವಳೆ, ಪ್ರಭಾಕರ ಬೋಮಲೆ ಸೇರಿದಂತೆ ಅನೇಕರಿದ್ದರು.


