ಪಂ. ಸೋಮನಾಥ ಮರಡೂರ ಅಪ್ರತಿಮ ಗಾಯಕರು

0
shreeramulu
Spread the love

ವಿಜಯಸಾಕ್ಷಿ ಸುದ್ದಿ, ಗದಗ :ರಾಷ್ಟ್ರ ಕಂಡ ಅಪ್ರತಿಮ ಗಾಯಕರಾಗಿ ಪ್ರಸಿದ್ಧರಾದ ಪಂ. ಸೋಮನಾಥ ಮರಡೂರ ಅವರಿಗೆ ಗುರು ಕುಮಾರ ಪಂಚಾಕ್ಷರಿ ಸಮ್ಮಾನ ಪ್ರಶಸ್ತಿ ಪ್ರದಾನ ಮಾಡುವ ಭಾಗ್ಯ ನನಗೆ ಕಲ್ಪಿಸಿದ ಲಿಂಗನಾಯಕನಹಳ್ಳಿಯ ಜಂಗಮ ಕ್ಷೇತ್ರದ ಪೂಜ್ಯಶ್ರೀ ಚನ್ನವೀರ ಮಹಾಸ್ವಾಮಿಗಳಿಗೂ ಹಾಗೂ ಗದುಗಿನ ಶ್ರೀ ಗುರು ಪಂಚಾಕ್ಷರಿ ಸೇವಾ ಸಮಿತಿಯ ಅಧ್ಯಕ್ಷ ಡಾ. ರಾಜಗೂರು ಗುರುಸ್ವಾಮಿ ಕಲಿಕೇರಿ ಹಾಗೂ ಸಮಿತಿಯ ಎಲ್ಲ ಪದಾಧಿಕರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಅವರು ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿ ಶ್ರೀ ಚನ್ನವೀರ ಮಹಾಶಿವಯೋಗಿಗಳವರ ಮಠ, ಶ್ರೀ ಗುರು ಪಂಚಾಕ್ಷರಿ ಸೇವಾ ಸಮಿತಿ ಗದಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಉತ್ಸವ, ಪಂಚಾಕ್ಷರಿ ಗದಗ ಘರಾನಾ ಸಮ್ಮೇಳನ, ಗುರು ಕುಮಾರ ಪಂಚಾಕ್ಷರಿ ಸಮ್ಮಾನ-2024 ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಪದ್ಮಭೂಷಣ ಡಾ. ಪುಟ್ಟರಾಜ ಗವಾಯಿಗಳವರ ಹಿರಿಯ ಶಿಷ್ಯರಾದ ಪಂ. ಸೋಮನಾಥ ಮರಡೂರ ಅವರು ಗವಾಯಿಗಳವರ ಸಾನಿಧ್ಯದಲ್ಲಿ ದಶಕಗಳಿಗಿಂತ ಹೆಚ್ಚು ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಬ್ಯಾಸ ಮಾಡಿ, ಅವರ ಆಶಿರ್ವಾದ ಪಡೆದು ಕರ್ನಾಟಕವಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಜನಮನ್ನಣೆ ಪಡೆದಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಂ. ಡಾ. ರಾಜಗುರು ಗುರುಸ್ವಾಮಿ ಕಲಿಕೇರಿ ಮಾತನಾಡಿ, ಕಾರ್ಯಕ್ರಮ ನಡೆಸಲು ಸಕಲ ರೀತಿಯ ಸಹಕಾರ ಮತ್ತು ಆಶೀರ್ವಾದ ನೀಡಿದ ಲಿಂಗನಾಯಕನಹಳ್ಳಿಯ ಜಂಗಮ ಕ್ಷೇತ್ರದ ಪೂಜ್ಯಶ್ರೀ ಚನ್ನವೀರ ಮಹಾಸ್ವಾಮಿಗಳಿಗೆ ಹಾಗೂ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ಸಮಾರಂಭದಲ್ಲಿ ಪೂಜ್ಯಶ್ರೀ ಹೊಳಲಿನ ಚನ್ನಬಸವದೇವರು, ಭರಮಪ್ಪ ಕುಂಚೂರ, ಚನ್ನವೀರಗೌಡ್ರು, ನಾಗನಗೌಡ್ರು, ಬಸನಗೌಡ್ರು, ದ್ಯಾಮವ್ವ ಕುಷ್ಟಗಿ, ಕಾರ್ಯದರ್ಶಿ ಮಲ್ಲಯ್ಯ ಶಿರೋಳಮಠ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ. ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಯುವ ಪುರಸ್ಕಾರ ಪುರಸ್ಕೃತ ಯುವ ಗಾಯಕ ವೆಂಕಟೇಶ ಆಲ್ಕೋಡರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ರಾಷ್ಟ್ರೀಯ ಘರಾನಾ ಸಮ್ಮೇಳನದಲ್ಲಿ ಡಾ. ನಾರಾಯಣ ಹಿರೇಕೊಳಚಿ ವಾಯೋಲೀನ್ ನುಡಿಸಿದರು. ಡಾ. ಶಿವಬಸಯ್ಯ ಗಡ್ಡದಮಠ, ವೆಂಕಟೇಶ ಆಲಕೋಡ, ಸೋಮಶೇಖರ ಡಾವಣಗೇರಿ, ತಿಪ್ಪಣ್ಣ ಶಿರಿಗೇರಿ ಗಾಯನ ಕಾರ್ಯಕ್ರಮ ನೀಡಿದರು. ವಿರುಪಾಕ್ಷಯ್ಯ ಹೊಸಳ್ಳಿಮಠ ಬಾನ್ಸೂರಿ ನುಡಿಸಿದರು. ಪಂ. ಶರಣಕುಮಾರ ಗುತ್ತರಗಿ, ಪ್ರೊ. ಮೃತ್ಯುಂಜಯ ಮಠದ, ವೀರಭದ್ದರಪ್ಪ ಬೆಣಕಲ್ಲ, ರಾಜು ಹಿರೇಮಠ ಹಾಗೂ ಸಿದ್ದು ಎತ್ನಳ್ಳಿ ತಬಲಾ ಸಾಥ್ ನೀಡಿದರು. ಸುಕ್ರಸಾಬ ಮುಲ್ಲಾ ಹಾಗೂ ಶ್ರೀಶೈಲ ಚಿಕ್ಕಮಠ ಹಾರ್ಮೋನಿಯಂ ಸಾಥ್ ನೀಡಿದರು. ಪಂ. ಶಿವಲಿಂಗಯ್ಯಶಾಸ್ತಿçಗಳು ಹಿರೇಮಠ ಸಿದ್ದಾಪೂರ ಹಾಗೂ ಸಿದ್ಧಲಿಂಗಯ್ಯಶಾಸ್ತಿç ಗಡ್ಡದಮಠ ಕಾರ್ಯಕ್ರಮ ನಿರೂಪಿಸಿದರು.

ಸೇವಾ ಸಮಿತಿಯ ಉಪಾಧ್ಯಕ್ಷ, ಶ್ರೀ ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ವೇ.ಮೂ. ಮಹೇಶ್ವರ ಸ್ವಾಮಿಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಲಿಂಗನಾಯಕನಹಳ್ಳಿಯ ಜಂಗಮ ಕ್ಷೇತ್ರದ ಪೂಜ್ಯಶ್ರೀ ಚನ್ನವೀರ ಮಹಾಸ್ವಾಮಿಗಳು ನಾಡಿನ ಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿ, ದೇಶ ಕಂಡ ಪ್ರಸಿದ್ಧ ಗಾಯಕರಾದ ಪಂ. ಸೋಮನಾಥ ಮರಡೂರ ಅವರಂತಹ ಮಹಾನ್ ಕಲಾವಿದರಿಗೆ ಗೌರವ ಸಲ್ಲಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here