ತಿರುವನಂತಪುರಂ: ಭಾರತದ ಕ್ರೀಡಾ ಲೋಕದ ಹೆಮ್ಮೆ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ ಅವರ ಜೀವನ ಸಂಗಾತಿ ವಿ. ಶ್ರೀನಿವಾಸನ್ (67) ನಿಧನರಾಗಿದ್ದಾರೆ. ಈ ಘಟನೆ ಕ್ರೀಡಾ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ದುಃಖ ಮೂಡಿಸಿದೆ.
ಶುಕ್ರವಾರ ತಡರಾತ್ರಿ 1 ಗಂಟೆ ಸುಮಾರಿಗೆ ತಿಕ್ಕೋಡಿ ಪೆರುಮಾಳ್‌ಪುರಂನಲ್ಲಿರುವ ನಿವಾಸದಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಈ ವೇಳೆ ಪಿ.ಟಿ. ಉಷಾ ಅವರು ಮನೆಯಲ್ಲಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಮಲಪ್ಪುರಂ ಜಿಲ್ಲೆಯ ಪೊನ್ನಾನಿ ತಾಲೂಕಿನ ಕುಟ್ಟಿಕ್ಕಾಡ್‌ನ ವೆಂಗಲಿ ಥರಾವದ್ ಮೂಲದ ಶ್ರೀನಿವಾಸನ್, ನಾರಾಯಣನ್ ಮತ್ತು ಸರೋಜಿನಿ ದಂಪತಿಯ ಪುತ್ರರಾಗಿದ್ದು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)ಯಲ್ಲಿ ಡೆಪ್ಯೂಟಿ ಎಸ್‌ಪಿ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
1991ರಲ್ಲಿ ಪಿ.ಟಿ. ಉಷಾ ಅವರನ್ನು ವಿವಾಹವಾಗಿದ್ದ ಅವರು, ಸದಾ ಅವರ ವೈಯಕ್ತಿಕ ಮತ್ತು ವೃತ್ತಿಜೀವನಕ್ಕೆ ಬೆಂಬಲವಾಗಿ ನಿಂತಿದ್ದರು. ದಂಪತಿಗೆ ಡಾ. ಉಜ್ವಲ್ ವಿಘ್ನೇಶ್ ಎಂಬ ಪುತ್ರನಿದ್ದಾನೆ.
ಘಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಿ.ಟಿ. ಉಷಾ ಅವರಿಗೆ ಸಂತಾಪ ಸೂಚಿಸಿದ್ದಾರೆ. ಕ್ರೀಡಾ ಮತ್ತು ರಾಜಕೀಯ ಕ್ಷೇತ್ರದ ಪ್ರಮುಖರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಶೋಕ ಸಂದೇಶಗಳನ್ನು ವ್ಯಕ್ತಪಡಿಸಿದ್ದಾರೆ.



