ವಿಜಯಸಾಕ್ಷಿ ಸುದ್ದಿ, ಚಿಕ್ಕನಾಯ್ಕನಹಳ್ಳಿ : ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮಠಗಳ ಕೊಡುಗೆ ಅಪಾರ. ಸಂಸ್ಕಾರ, ಸದ್ವಿಚಾರಗಳಿಂದ ಜೀವನದಲ್ಲಿ ಶ್ರೇಯಸ್ಸನ್ನು ಕಾಣಲು ಸಾಧ್ಯವಿದೆ. ಈ ನಾಡಿನ ಮಠಗಳು ಜನತೆಯ ಬಾಳ ಬದುಕಿಗೆ ಬೆಳಕು ತೋರುವ ಆಧ್ಯಾತ್ಮದ ಕೇಂದ್ರಗಳಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ತಾಲೂಕಿನ ಶ್ರೀಮದ್ರಂಭಾಪುರಿ ಶಾಖಾ ಕುಪ್ಪೂರು ಗದ್ದುಗೆ ಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭೌತಿಕ ಸಿರಿ ಸಂಪತ್ತು ಶಾಶ್ವತವಲ್ಲ. ಸತ್ಯ ಮತ್ತು ಧರ್ಮ ಒಂದೇ ಸ್ಥಿರ. ತುಳಿದು ಬದುಕುವವರ ಮುಂದೆ ತಿಳಿದು ಬದುಕು. ಅಳೆದು ಬದುಕುವವರ ಮುಂದೆ ಬೆಳೆದು ಬದುಕು. ಜೀವನ ಶ್ರೇಯಸ್ಸಿಗೆ, ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾಕಿರಣ. ವೀರಶೈವ ಧರ್ಮ ಧಾರ್ಮಿಕ ಸಾಮಾಜಿಕ ಮತ್ತು ಶೈಕ್ಷಣಿಕ ಮೌಲ್ಯಗಳನ್ನು ಸಾರುತ್ತಾ ಬಂದಿರುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳು ಸಕಲರ ಬಾಳಿಗೂ ಬೆಳಕು ತೋರಿವೆ. ವೀರಶೈವ ಧರ್ಮದಲ್ಲಿ ಅಷ್ಟೇ ಅಲ್ಲ ಎಲ್ಲ ಧರ್ಮಗಳಲ್ಲಿ ಶ್ರೀ ಗುರುವಿವೆ ಪ್ರಥಮ ಸ್ಥಾನವನ್ನು ಕಲ್ಪಿಸಿದ್ದಾರೆ.
ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಬದುಕಿನ ಅಜ್ಞಾನವೆಂಬ ಕತ್ತಲೆ ಕಳೆಯಲು ಗುರು ಅವಶ್ಯವಾಗಿ ಬೇಕು. ಕುಪ್ಪೂರು ಗದ್ದುಗೆ ಮಠದ ಶ್ರೀ ಮರುಳಸಿದ್ಧೇಶ್ವರ ಸ್ಥಾನ ಪವಿತ್ರ ಜಾಗೃತ ಸ್ಥಳ. ಈ ಹಿಂದಿನ ಲಿಂ.ಚಂದ್ರಶೇಖರ ಶಿವಾಚಾರ್ಯರು ಮತ್ತು ಲಿಂ. ಯತೀಶ್ವರ ಶಿವಾಚಾರ್ಯರು ಈ ಭಾಗದ ಭಕ್ತರಿಗೆ ಮಾರ್ಗದರ್ಶನ ನೀಡಿ ಶ್ರೀ ಮಠದ ಶ್ರೇಯೋಭಿವೃದ್ಧಿಗೆ ಕಾರಣರಾಗಿದ್ದಾರೆ. ಯತೀಶ್ವರ ಶ್ರೀಗಳ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಇಂದು ಶಾಸ್ತ್ರೋಕ್ತವಾಗಿ ಶ್ರೀ ಗುರು ಪಟ್ಟಾಧಿಕಾರವನ್ನು ತೇಜೇಶ್ವರ ಶಿವಾಚಾರ್ಯ ಸ್ವಾಮಿಗಳು ಸ್ವೀಕರಿಸಿದ್ದಾರೆ. ಭಕ್ತರ ಬಾಳಿಗೆ ಬೆಳಕು ತೋರಿ ಸನ್ಮಾರ್ಗಕ್ಕೆ ಕರೆ ತರುವ ಬಹು ದೊಡ್ಡ ಜವಾಬ್ದಾರಿ ಅವರ ಮೇಲೆ ಇದೆ. ಶ್ರೀಗಳವರ ಅಧಿಕಾರಾವಧಿಯಲ್ಲಿ ಶ್ರೀ ಮಠ ಉತ್ತರೋತ್ತರ ಅಭಿವೃದ್ಧಿ ಹೊಂದಲೆಂದು ಬಯಸಿ ಸ್ಮರಣಿಕೆ ಫಲ ತಾಂಬೂಲವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ನೂತನ ಪಟ್ಟಾಧ್ಯಕ್ಷರಾದ ತೇಜೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಎಲ್ಲ ಸದ್ಭಕ್ತರ ಸಹಕಾರದಿಂದ ಮಠವನ್ನು ಅಭಿವೃದ್ಧಿ ಮಾಡುತ್ತೇವೆಂದು ಸಂಕಲ್ಪ ಕೈಗೊಂಡರು.
ಹೊನ್ನವಳ್ಳಿ ಕರಿಸಿದ್ಧೇಶ್ವರ ಮಠದ ಶಿವಪ್ರಕಾಶ ಶ್ರೀಗಳು ಮತ್ತು ತಿಪಟೂರು ರುದ್ರಮುನಿ ಶ್ರೀಗಳು ಉಪದೇಶಾಮೃತ ನೀಡಿದರು. ನಾಡಿನ ಸುಮಾರು 25ಕ್ಕೂ ಹೆಚ್ಚು ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಶ್ರೀ ಮಠದ ಆಡಳಿತಾಧಿಕಾರಿ ವಾಗೀಶ ಪಂಡಿತಾರಾಧ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಲವಾರು ಗಣ್ಯರಿಗೆ ಹಾಗೂ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಹೆಚ್.ಎನ್.ಗಂಗಾಧರ ಇವರಿಂದ ಸ್ವಾಗತ ನಡೆಯಿತು. ಬೆಂಗಳೂರಿನ ಸವಿತಾ ಶಿವಕುಮಾರ ನಿರೂಪಿಸಿದರು. ಕಿತ್ತನಕೆರೆ ಸಿದ್ದಪ್ಪನವರಿಂದ ಭಕ್ತಿ ಗೀತೆ ಜರುಗಿತು. ಸಮಾರಂಭದ ನಂತರ ನೂತನ ಶ್ರೀಗಳವರ ಪಲ್ಲಕ್ಕಿ ಮಹೋತ್ಸವ, ಅನ್ನ ದಾಸೋಹ ನಡೆಯಿತು.
ನೂತನ ಶ್ರೀಗಳವರಿಗೆ ಧಾರ್ಮಿಕ ಸಂಸ್ಕಾರ ನೀಡಿ ಬ್ರಹ್ಮೋಪದೇಶ ಮಾಡಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಭಾರತ ಭೂಮಿ ಧರ್ಮಭೂಮಿ. ಸಾಹಿತ್ಯ ಸಂಸ್ಕೃತಿಗಳ ತಾಣ. ಆಧ್ಯಾತ್ಮ ಕೇಂದ್ರಗಳು ನಿರಂತರ ಶ್ರಮಿಸಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸಿವೆ. ಕುಪ್ಪೂರು ಗದ್ದುಗೆ ಮಠದ ನೂತನ ತೇಜೇಶ್ವರ ಶಿವಾಚಾರ್ಯರಿಂದ ಶ್ರೀ ಮಠ ಉಜ್ವಲವಾಗಿ ಅಭಿವೃದ್ಧಿಯಾಗಲೆಂದು ಆಶಿಸಿದರು.
Advertisement