ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶನಿವಾರ ಶಿರಹಟ್ಟಿಯ ಪಟ್ಟಣ ಪಂಚಾಯಿತಿ ಕಚೇರಿಗೆ ಗದಗ ಲೋಕಾಯುಕ್ತ ಡಿಎಸ್‌ಪಿ ವಿಜಯ ಬಿರಾದಾರ ನೇತೃತ್ವದ ತಂಡ ಭೇಟಿ ನೀಡಿತು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ/ಇಂಜಿನಿಯರ್/ಸಿಬ್ಬಂದಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ, ನಾಮ ನಿರ್ದೇಶಿತ ಸದಸ್ಯರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ನಲ್ಲಿ ಮಣ್ಣು ಹಾಕದೇ ಬಿಲ್ ತೆಗೆದಿದ್ದನ್ನು ದಾಖಲೆ ಸಮೇತ ಪ್ರಶ್ನಿಸಿದ್ದಕ್ಕೆ ಮುಖ್ಯಾಧಿಕಾರಿ ತಮಗೆ ನೋಟೀಸ್ ನೀಡಿದ್ದು ಸರಿಯೇ ಎಂದು ನಾಮನಿರ್ದೇಶಿತ ಸದಸ್ಯರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಲೋಕಾಯುಕ್ತರ ಎದುರಿಗೆ ಮುಖ್ಯಾಧಿಕಾರಿ ತಮಗೆ ನೀಡಿದ ನೋಟೀಸ್ ಪ್ರತಿಯನ್ನು ತೋರಿಸಿದರು. ನಿಗದಿತ ಸಮಯದಲ್ಲಿ ಸಭೆಗಳನ್ನು ನಡೆಸುತ್ತಿಲ್ಲ, ಇಂಜಿನಿಯರ್ ಲಾಗಿನ್ ಇತರರೂ ಉಪಯೋಗಿಸುತ್ತಿದ್ದಾರೆ. ಮಳಿಗೆಗಳ ಹರಾಜು ಪ್ರಕ್ರಿಯೆ ನಡೆದಿಲ್ಲ, ಸಭೆಯಲ್ಲಿ ಅನುಮೋದನೆ ಇಲ್ಲದೇ ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ. ಭ್ರಷ್ಟಾಚಾರ ನಡೆದಿದ್ದನ್ನು ಪ್ರಶ್ನಿಸಿದರೆ ನಮಗೆ ನೋಟೀಸ್ ನೀಡಲಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತರು ಈ ಎಲ್ಲ ವಿಷಯಗಳ ಕುರಿತು ಗದಗ ಯೋಜನಾ ನಿರ್ದೆಶಕರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದು ಸೂಕ್ತ. ನಮಗೆ ಫಾರಂ 1 ಮತ್ತು 2ರಲ್ಲಿ ದೂರನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಶಿರಹಟ್ಟಿ ಪ.ಪಂನ ಅಡಿಟ್ ರಿಪೋರ್ಟ್, ಲೇಔಟ್‌ಗಳ ಕಡತಗಳು, ಬೀದಿ ದೀಪಗಳ ಖರ್ಚು, ಕುಡಿಯುವ ನೀರಿನ ಘಟಕಗಳ ಮಾಹಿತಿ, ವಾಟರ್ ಟ್ಯಾಂಕ್ ಕ್ಲೀನಿಂಗ್ ವರದಿ, ಟ್ಯಾಕ್ಸ್ ಲೇಔಟ್ ರಜಿಸ್ಟರ್, ಖಾತಾ ಬದಲಾವಣೆ ರಜಿಸ್ಟರ್ ಹೀಗೆ 33ಕ್ಕೂ ಹೆಚ್ಚು ದಾಖಲೆಗಳನ್ನು ಸೆ.2ರ ಒಳಗೆ ಗದಗ ಕಚೇರಿಗೆ ತಲುಪಿಸುವಂತೆ ಇಂಜಿನಿಯರ್‌ಗೆ ಲೋಕಾಯುಕ್ತ ಅಧಿಕಾರಿಗಳು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ನಾಮನಿರ್ದೇಶಿತ ಸದಸ್ಯ ಅಲ್ಲಾಭಕ್ಷಿ ನಗಾರಿ, ಸೋಮನಗೌಡ ಮರಿಗೌಡ, ಇಂಜಿನಿಯರ್ ಕಾಟೇವಾಲ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಶಿರಹಟ್ಟಿ ಪಟ್ಟಣ ಪಂಚಾಯಿತಿಲ್ಲಿ ಒಂದು ಉತಾರ ಪಡೆಯುವುದಕ್ಕೆ ವರ್ಷಗಟ್ಟಲೇ ಅಲೆದಾಡಿದರೂ ನಮ್ಮಿಂದ ತೆರಿಗೆ ತುಂಬಿಸಿಕೊಂಡು ಸತಾಯಿಸುತ್ತಿದ್ದಾರೆಂದು ತಾವು ನೀಡಿದ್ದ ಅರ್ಜಿಯ ಸ್ವೀಕೃತಿ ಪ್ರತಿಯನ್ನು ಲೋಕಾಯುಕ್ತರಿಗೆ ತೋರಿಸಿದರು. ಎಲ್ಲ ಕೆಲಸ-ಕಾರ್ಯಗಳನ್ನು ಬಿಟ್ಟು ನಿತ್ಯವೂ ಕಚೇರಿಗೆ ಅಲೆದಾಡಬೇಕಾದ ದುಸ್ಥಿತಿ ಬಂದಿದೆ ಎಂದು ಅನೇಕರು ತಮ್ಮ ಅಳಲನ್ನು ತೋಡಿಕೊಂಡರು. ಸಾರ್ವಜನಿಕರು ದೂರು ಸ್ವೀಕರಿಸುತ್ತಿರುವ ಸಂದರ್ಭದಲ್ಲೇ ಪಟ್ಟಣ ಪಂಚಾಯತ ಸಿಬ್ಬಂದಿ ಓರ್ವರಿಗೆ ಸ್ಥಳದಲ್ಲಿಯೇ ಉತಾರ ಪೂರೈಸಿದರು.