ವಿಜಯಸಾಕ್ಷಿ ಸುದ್ದಿ, ಗದಗ: ರಾಜಪ್ರಭುತ್ವ ಕಾಲದಲ್ಲಿ ರಾಜನೇ ಸರ್ವಶ್ರೇಷ್ಠನಾಗಿದ್ದ. ಅವನ ಆಜ್ಞೆ ಮೀರುವ ಹಾಗಿರಲಿಲ್ಲ. ಇಂದು ಇರುವುದು ಪ್ರಜಾಪ್ರಭುತ್ವ ಕಾಲ. ಇಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳ ಮತಗಳಿಂದ ಆಯ್ಕೆಯಾದ ಅಭ್ಯರ್ಥಿಗಳು ಪ್ರಜಾಸೇವಕರಾಗಿರುತ್ತಾರೆ. ಅವರೊಂದಿಗೆ ಕೈ ಜೋಡಿಸಿ ನಾಡಿನ ಹಾಗೂ ದೇಶದ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು. ಅದೇ ಮಾದರಿಯಲ್ಲಿ ಇಂದು ಇಲ್ಲಿಯ ಶಾಲಾ ಸಂಸತ್ತು ರಚನೆಯಾಗಿದೆ. ಶಾಲೆಯ ಶಿಸ್ತು, ಸ್ವಚ್ಛತೆ ಹಾಗೂ ಶಾಲಾ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಸಿ.ಎಸ್. ಪಾಟೀಲ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಡಾ. ರಾಮಚಂದ್ರ ಹಂಸನೂರರು ನುಡಿದರು.
ಅವರು ಶಾಲಾಂಸತ್ತು ರಚನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ಶಿಕ್ಷಕ ಎಚ್.ಪಿ. ಹಿರೇಮಠರು ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಕ್ಕಳಿಗೆ ಹಿತವಚನ ಹೇಳಿದರು. ಕೆ.ಸಿ. ಬಾಗೇವಾಡಿಯವರು ಸಂದರ್ಭೋಚಿತವಾಗಿ ಮಾತನಾಡಿದರು.
ಶಾಲಾ ಪ್ರಧಾನಿಯಾಗಿ ಜನ್ನಿಫರ ಡೇವಿಡ್ ಝಳಕಿ, ಉಪಪ್ರಧಾನಿಯಾಗಿ ಅಮೃತಯ್ಯ ವೀರೇಶ ಹಿರೇಮಠ ಆಯ್ಕೆಯಾದರು. ಉಳಿದಂತೆ ಕ್ರೀಡಾ ಮಂತ್ರಿಯಾಗಿ ರಾಮು ಪ್ರಭಳೇಕರ, ವಾರ್ತಾ ಮಂತ್ರಿಯಾಗಿ ನಿರ್ಮಲಾ ಲಮಾಣಿ, ಆರೋಗ್ಯ ಮಂತ್ರಿಯಾಗಿ ಕೀರ್ತಿ ಅಂಗಡಿ, ಹಣಕಾಸು ಮಂತ್ರಿಯಾಗಿ ದ್ರಾಕ್ಷಾಯಣಿ ಪಾಟೀಲ, ಚರ್ಚಾಕೂಟ ಮಂತ್ರಿಯಾಗಿ ಆಫ್ರೀನ್ ಕೊಪ್ಪಳ, ಸ್ವಚ್ಛತಾ ಮಂತ್ರಿಯಾಗಿ ಮೈಲಾರಿ ಹಾದಿಮನಿ, ಶಹಜಾದಬಿ ಮುಲ್ಲಾ ಸಂತೋಷ ವಾಲ್ಮೀಕಿ ಆಯ್ಕೆಯಾದರು.
ಶಿಕ್ಷಕಿಯರಾದ ಶ್ವೇತಾ ಪವಾರ ಹಾಗೂ ಗಾಯತ್ರಿ ಪಾಟೀಲ ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿಭಾಯಿಸಿದರು. ವಿ.ವಿ. ಪಾಟೀಲ ಹಾಗೂ ಮಂಜುಳಾ ಪಾಟೀಲ ಮತ ಎಣಿಕೆದಾರರಾಗಿ ಕಾರ್ಯ ನಿಭಾಯಿಸಿದರು.
ನಿರ್ಮಲಾ ಲಮಾಣಿ ಪ್ರಾರ್ಥಿಸಿದರು. ವಂದನಾ ಸ್ವಾಗತಿಸಿದರು. ಶಿಕ್ಷಕಿ ಎಸ್.ಎಮ್. ತಳವಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.