ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ವಾಹನ ಸವಾರರ ಜೀವದ ರಕ್ಷಣೆಯೊಂದಿಗೆ ರಸ್ತೆ ನಿಯಮ ಪಾಲನೆಗಾಗಿ ಪಟ್ಟಣದಲ್ಲಿ ಟ್ರಾಫಿಕ್ ರೂಲ್ಸ್ ಕಡ್ಡಾಯವಾಗಿಜಾರಿ ಗೊಳಿಸಲಾಗುತ್ತಿದೆ. ಪಟ್ಟಣ ಸೇರಿ ಗ್ರಾಮೀಣ ಭಾಗದ ಜನತೆ ಸಹಕಾರ ನೀಡಬೇಕು ಎಂದು ತಹಸೀಲ್ದಾರ ವಾಸುದೇವ ಎಂ ಸ್ವಾಮಿ ಹೇಳಿದರು.
ಅವರು ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಸುಗಮ ಸಂಚಾರಿ ನಿಯಮ ಪಾಲನೆ ಕುರಿತು ಪೊಲೀಸ್‌ಠಾಣೆಯಲ್ಲಿ ಕೆಲ ವರ್ಷಗಳಿಂದ ಕಾರಣಾಂತರಗಳಿಂದ ನಿರ್ಲಕ್ಷಿಸಲ್ಪಟ್ಟಿದ್ದ ಟ್ರಾಫಿಕ್ ರೂಲ್ಸ್ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ ಕರೆದ ವ್ಯಾಪಾರಸ್ಥರ, ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪಟ್ಟಣ ತೀವೃಗತಿಯಲ್ಲಿ ಬೆಳೆಯುತ್ತಿದ್ದು ಬಹುತೇಕರು ಸಂಚಾರ ನಿಮಯ ಉಲ್ಲಂಘಿಸುತ್ತಿದ್ದಾರೆ. ಇದರಿಂದ ನಿತ್ಯ ಸಾಕಷ್ಟು ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಪೊಲೀಸ್ ಮತ್ತು ಪುರಸಭೆಯವರು ಕೈಗೊಳ್ಳುವ ಕ್ರಮಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದರು.
ಸಿಪಿಐ ನಾಗರಾಜ ಮಾಡಳ್ಳಿ ಮಾತನಾಡಿ, ಪಟ್ಟಣದ ಮುಖ್ಯ ಬಜಾರ್ ರಸ್ತೆಯಲ್ಲಿನ ವಾಹನ ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ನಿವಾರಣೆಯಿಂದ ಸಾರ್ವಜನಿಕರು ಅನುಭವಿಸುವ ತೊಂದರೆ ತಪ್ಪುವ ಜತೆಗೆ ಸಣ್ಣಪುಟ್ಟ ಕಳ್ಳತನ, ತಂಟೆ-ತಕರಾರು ತಪ್ಪುತ್ತದೆ. ದೊಡ್ಡ ಲಾರಿಗಳ ಲೋಡಿಂಗ್ ಅನ್ಲೋಡಿಂಗ್ ರಾತ್ರಿ 9ರಿಂದ ಬೆಳಿಗ್ಗೆ 8ರೊಳಗೆ ಮುಗಿಸಬೇಕು ಎಂದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ ಮತ್ತು ಅಶೋಕ ಬಟಗುರ್ಕಿ ಮಾತನಾಡಿದರು. ಈ ವೇಳೆ ಪಿಎಸ್‌ಐ ಈರಪ್ಪ ರಿತ್ತಿ, ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ, ವ್ಯಾಪಾರಸ್ಥರಾದ, ಮಾಲತೇಶ ಅಗಡಿ, ವೈಭವ ಗೋಗಿ, ಆರ್.ಪಿ. ಶಿರಹಟ್ಟಿ, ಎ.ಬಿ. ಬರಿಗಾಲಿ, ಅಭಯ ಜೈನ್, ಕರಣರಾಮ್ ಪಟೇಲ್, ಸದಾನಂದ ನಂದೆಣ್ಣವರ, ಅತ್ತಾರ್, ಎಂ.ಎಸ್. ಹಂಜಗಿ, ಕೊತವಾಲ್, ಮಲ್ಲಾರಿ, ಶೇಖಪ್ಪ ಮಾಗಡಿ, ಡಂಬಳ, ಎ.ಎಂ. ಸಂಶಿ, ಸೋಮಪ್ಪ ಗೌರಿ, ಬಸವರಾಜ ಮುಂತಾದವರಿದ್ದರು. ಪೊಲೀಸ್ ಸಿಬ್ಬಂದಿ ಮಾಲತಿ ಸೀಗಿಹಳ್ಳಿ ಸ್ವಾಗತಿಸಿ ನಿರೂಪಿಸಿದರು.