ದೆಹಲಿ ಕಾರು ಸ್ಫೋಟ ಘಟನೆಗೆ ಪುಲ್ವಾಮಾ ನಂಟು: ಕೃತ್ಯದ ಹಿಂದೆ ಉಗ್ರರ ಕೈವಾಡ?

0
Spread the love

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭೀಕರ ಕಾರ್​​ ಸ್ಪೋಟಕಕ್ಕೆ 11 ಜನ ಬಲಿಯಾಗಿದ್ದು, 30ಕ್ಕೂ ಹೆಚ್ಚು ಜನಕ್ಕೆ ಗಂಭೀರ ಗಾಯಗಳಾಗಿವೆ. ನಿನ್ನೆ ಸಂಜೆ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಈ ಭೀಕರ ಕಾರು ಸ್ಫೋಟವು ರಾಜಧಾನಿಯಲ್ಲಿ ಆತಂಕ ಸೃಷ್ಟಿಸಿದೆ.

Advertisement

ಮೃತದೇಹಗಳು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು, ಗಾಯಾಳುಗಳಿಗೆ LNJP ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ ಸ್ಫೋಟದ ತೀವ್ರತೆಗೆ ಮೆಟ್ರೋ ಸ್ಟೇಷನ್​ಗೂ ಹಾನಿಯಾಗಿದ್ದು, ಸ್ಫೋಟದ ಬೆನ್ನೆಲ್ಲೇ ಕೆಂಪುಕೋಟೆಯ ಪಾರ್ಕಿಂಗ್​​ ಕ್ಲೋಸ್​ ಮಾಡಲಾಗಿದೆ.

ಸ್ಫೋಟಗೊಂಡ HR 26 CE 7674 ನೋಂದಣಿಯ i20 ಕಾರು ಮೊಹಮ್ಮದ್ ಸಲ್ಮಾನ್ ಎಂಬುವವರ ಹೆಸರಿನಲ್ಲಿ ಹರಿಯಾಣದಲ್ಲಿ ನೋಂದಣಿಯಾಗಿತ್ತು. ಗುರುಗ್ರಾಮದ ಶಾಂತಿನಗರ ನಿವಾಸಿ ಸಲ್ಮಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವರು ಕಾರನ್ನು ಸುಮಾರು ಒಂದೂವರೆ ವರ್ಷದ ಹಿಂದೆ ದೆಹಲಿಯ ಓಕ್ಲಾ ನಿವಾಸಿ ದೇವೇಂದರ್ ಅವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.

ತನಿಖೆಯನ್ನು ಮುಂದುವರಿಸಿದ ಪೊಲೀಸರಿಗೆ, ದೇವೇಂದರ್ ಕೂಡ ಕಾರನ್ನು ಜಮ್ಮು-ಕಾಶ್ಮೀರದ ಪುಲ್ವಾಮಾ ಮೂಲದ ತಾರೀಕ್ ಎಂಬ ವ್ಯಕ್ತಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ. ಈ ಬೆಳವಣಿಗೆಯು ಪ್ರಕರಣಕ್ಕೆ ಪುಲ್ವಾಮಾ ನಂಟನ್ನು ಸೂಚಿಸಿದ್ದು, ತನಿಖಾ ಸಂಸ್ಥೆಗಳಲ್ಲಿ ಆತಂಕ ಮೂಡಿಸಿದೆ.

ಉಗ್ರರ ಕೈವಾಡದ ಬಗ್ಗೆಯೂ ಶಂಕೆ ವ್ಯಕ್ತವಾಗಿದ್ದು, ದೆಹಲಿ ಪೊಲೀಸರ ತಂಡವೊಂದು ತಾರೀಕ್‌ನ ಜಾಡು ಹಿಡಿದು ಪುಲ್ವಾಮಾಗೆ ತೆರಳಿದೆ. ಸದ್ಯಕ್ಕೆ ಸಲ್ಮಾನ್ ಮತ್ತು ದೇವೇಂದರ್ ಅವರನ್ನು ವಶಕ್ಕೆ ಪಡೆದು, ಸ್ಫೋಟದ ಕಾರಣ, ಉದ್ದೇಶ ಮತ್ತು ಪಿತೂರಿಯ ಬಗ್ಗೆ ಸಮಗ್ರ ವಿಚಾರಣೆ ನಡೆಸಲಾಗುತ್ತಿದೆ. ಎಫ್‌ಎಸ್‌ಎಲ್, ಎನ್‌ಎಸ್‌ಜಿ ಮತ್ತು ಎನ್‌ಐಎ ಅಧಿಕಾರಿಗಳು ಸಹ ತನಿಖೆಯಲ್ಲಿ ತೊಡಗಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here