ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : 12ನೇ ಶತಮಾನದಲ್ಲಿದ್ದ ಶರಣ-ಶರಣೆಯರು ಈ ಸಮಾಜದಲ್ಲಿಯ ಅಜ್ಞಾನದ ಅಂಧಕಾರವನ್ನು ತೆಗೆದು ಹಾಕಲು ಶ್ರಮಿಸಿದ್ದಾರೆ. ಇವರ ಹಾದಿಯಲ್ಲಿಯೇ ಹರ್ಲಾಪೂರದ ಹಠಯೋಗಿ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಈ ಭಾಗದಲ್ಲಿ ಹಲವಾರು ಪವಾಡಗಳನ್ನು ಸೃಷ್ಟಿಸುವ ಮೂಲಕ ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಲು ಶ್ರಮಿಸಿದ್ದಾರೆ ಎಂದು ಹಿರೇವಡ್ಡಟ್ಟಿ ಹಿರೇಮಠದ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಇಲ್ಲಿಯ ಸಮೀಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದ ಜಾತ್ರಾ ಮಹೋತ್ಸವದಂಗವಾಗಿ 15 ದಿನಗಳ ಕಾಲ ಹಮ್ಮಿಕೊಂಡಿದ್ದ ಹಠಯೋಗಿ ಕೊಟ್ಟೂರೇಶ್ವರರ ಪುರಾಣ ಮಂಗಲೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹಠಯೋಗಿ ಕೊಟ್ಟೂರೇಶ್ವರರ ತಪೋಶಕ್ತಿಯಿಂದ ಈ ಸ್ಥಳವು ಜಾಗೃತಿಯ ನೆಲೆಯಾಗಿದ್ದು, ಭಕ್ತರು ಈ ಮಠದ ಸೇವೆಯಲ್ಲಿ ಪಾಲ್ಗೊಂಡು ಇಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಡ್ನೂರು-ರಾಜೂರು ಬೃಹ್ಮನಮಠದ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಪುರಾಣ ಎನ್ನುವುದು ಕೇವಲ ಒಬ್ಬರ ಜೀವನ ಚರಿತ್ರೆಯಲ್ಲ. ಅದರಲ್ಲಿಯ ಮೌಲ್ಯಾಧಾರಿತ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಸೊರಟೂರು ಓಂಕಾರೇಶ್ವರ ಹಿರೇಮಠದ ಫಕ್ಕೀರೇಶ್ವರ ಶಿವಾಚಾರ್ಯ ಸ್ವಾಮಿಗಳು, ಡಾ. ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿದರು. ವಿ.ಬಿ. ಸೋಮನಕಟ್ಟಿಮಠ, ಗೋವಿಂದರೆಡ್ಡಿ ಕೊಣ್ಣೂರು, ಸಿದ್ದು ಆಲೂರು, ಶರಣಪ್ಪಗೌಡ್ರ ಪಾಟೀಲ, ಶ್ರೀನಿವಾಸ ಮಾನೆ, ಸುರೇಶ ಅಂಗಡಿ, ನಿವೃತ್ತ ಶಿಕ್ಷಕ ರಾಮಣ್ಣ ಬೆಳಧಡಿ, ರಾಮಣ್ಣ ಹುಯಿಲಗೋಳ ಉಪಸ್ಥಿತರಿದ್ದರು.
ಪುರಾಣ ಪ್ರವಚನ ಮಂಗಲ ಮಾಡಿದ ಯಾದಗಿರಿಯ ಖೆಳಗಿಮಠದ ಮಲ್ಲಿಕಾರ್ಜುನಶಾಸ್ತಿçÃಗಳು ಹಿರೇಮಠ ಅವರಿಗೆ `ಪುರಾಣ ಪ್ರವೀಣ’ ಎಂಬ ಬಿರುದು ನೀಡಿ ಗೌರವಿಸಲಾಯಿತು. ಸೇವೆ ಸಲ್ಲಿಸಿದ ಮಹನೀಯರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಕೆ.ಬಿ. ವೀರಾಪೂರ, ಮಂಜುನಾಥ ಅರ್ಕಸಾಲಿ ಸಂಗೀತ ಸೇವೆ ನೀಡಿದರು. ಸಿದ್ದಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಕೆ.ಬಿ. ಕೊಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಜುಂಜಣಿ ನಿರೂಪಿಸಿದರು. ಪ್ರಾಧ್ಯಾಪಕ ಡಾ. ಎಸ್.ಸಿ. ಸರ್ವಿ ವಂದಿಸಿದರು.
ರೋಣ ಪುರಸಭೆ ಉಪಾಧ್ಯಕ್ಷ ಮಿಥುನ್ ಪಾಟೀಲ ಮಾತನಾಡಿ, ನಮ್ಮ ನಾಡಿನ ಶೃದ್ಧಾ ಕೇಂದ್ರಗಳು ಭಕ್ತರಲ್ಲಿ ಮಾನವೀಯ ಮೌಲ್ಯಗಳನ್ನು ನೀಡುವ ಕೇಂದ್ರಗಳಾಗಿವೆ. ಈ ನಿಟ್ಟಿನಲ್ಲಿ ಕೊಟ್ಟೂರೇಶ್ವರ ಮಠವು ಪ್ರಸಿದ್ಧಿಯಾಗಿದೆ. ಹಠಯೋಗಿಗಳಿಂದ ಈ ಮಠದ ಶಕ್ತಿಯು ಅಪಾರವಾಗಿದ್ದು, ನಾವೆಲ್ಲರೂ ಕೊಟ್ಟೂರೇಶ್ವರರ ಪುರಾಣದಲ್ಲಿ ಬರುವ ಹಲವಾರು ಸಂದೇಶಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದರು.