ಅದು ರಾಮ-ರಾವಣರ ಯುದ್ಧ ಸನ್ನಿಹಿತವಾದ ಕಾಲ. ಸ್ವರ್ಣಲಂಕೆಯನ್ನು ತಲುಪಲು ಬೇಕಾದ ಸೇತುವೆಯ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು. ಎಲ್ಲಾ ಕಪಿಗಳು ಸುತ್ತಮುತ್ತಲ ಗುಡ್ಡ ಬೆಟ್ಟಗಳಿಂದ ಸಣ್ಣ ಕಲ್ಲುಗಳನ್ನು ತಂದು ಸೇತುವೆಯ ನಿರ್ಮಾಣದಲ್ಲಿ ತೊಡಗಿದ್ದವು. ಎಲ್ಲರ ಪ್ರಯತ್ನದ ಫಲವಾಗಿ ಪುಟ್ಟ ಸೇತುವೆ ನಿರ್ಮಾಣವಾಯಿತು.
ಆದರೆ ಪ್ರಭು ಶ್ರೀರಾಮನಿಗೆ ಸೇತುವೆ ಅಷ್ಟೊಂದು ಬಲಿಷ್ಠವಾಗಿಲ್ಲ ಎಂಬ ಭಾವನೆ. ಸೇತುವೆ ತುಂಬಾ ತೆಳುವಾಗಿ ನಿರ್ಮಾಣವಾಗಿದೆ ಎಲ್ಲ ಕಪಿಗಳ ಭಾರಕ್ಕೆ ಬಿದ್ದು ಹೋಗಬಹುದು ಎಂಬ ಭಯ, ಜೊತೆಗೆ ತನ್ನಿಂದ ಯಾರಿಗೂ ಹಾನಿಯಾಗಬಾರದು ಎಂಬ ಮುಂದಾಲೋಚನೆ ಕೂಡ. ಆದ್ದರಿಂದ ಎಲ್ಲರಿಗಿಂತ ಮುಂಚೆ ತಾನು ಸೇತುವೆಯ ಮೇಲೆ ನಡೆದು ಹೋಗುವ ಪ್ರಯತ್ನದ ಅಂಗವಾಗಿ ಆತ ಹೆಜ್ಜೆ ಇಟ್ಟನು. ಪ್ರಭು ಶ್ರೀ ರಾಮ ಸೇತುವೆಯ ಮೇಲೆ ಕಾಲಿಟ್ಟೊಡನೆ ಸಮುದ್ರದಲ್ಲಿದ್ದ ಎಲ್ಲಾ ಜಲಚರಗಳು ಬಂದು ಸೇತುವೆಯನ್ನು ಗಟ್ಟಿಯಾಗಿ ಒತ್ತಿ ಹಿಡಿದವು. ಎಲ್ಲ ಜಲಚರಗಳ ಪ್ರಯತ್ನದ ಫಲವಾಗಿ ಸೇತುವೆ ಅತ್ಯಂತ ಬಲಿಷ್ಠವಾಯಿತು.
ಸೇತುವೆಯ ಮೇಲೆ ನಡೆದಾಡಿದ ಶ್ರೀರಾಮ ತೃಪ್ತನಾಗಿ ಹಿಂದಿರುಗಿ ಬಂದು ಸಮುದ್ರದ ದಡದಲ್ಲಿರುವ ಕಲ್ಲೊಂದರ ಮೇಲೆ ಕುಳಿತ.
ಇದನ್ನೆಲ್ಲ ಗಮನಿಸುತ್ತಿದ್ದ ಜಾಂಬವಂತ ಕರಡಿ ಶ್ರೀರಾಮನ ಬಳಿ ಬಂದು `ಪ್ರಭು, ಎಲ್ಲವೂ ನಿನ್ನ ಕೃಪೆಯಿಂದಲೇ ಆಗುತ್ತದೆ ಎಂಬುದು ಇಂದು ಸಾಬೀತಾಯಿತು. ಆದರೆ ನನ್ನದೊಂದು ಸಂದೇಹ’ ಎಂದು ಅರಿಕೆ ಮಾಡಿಕೊಂಡನು. ನಸುನಕ್ಕ ಪ್ರಭು ಶ್ರೀ ರಾಮ `ಹೇಳು ಜಾಂಬವಂತ, ಏನು ನಿನ್ನ ಸಂದೇಹ? ಎಂದು ಕೇಳಲು ಜಾಂಬವಂತನು `ಪ್ರಭು, ನಿನ್ನ ಕೃಪಾ ಕಟಾಕ್ಷದಿಂದಲೇ ಸೇತುವೆ ಬಲವಾಯಿತು ಎಂಬುದಾದರೆ ಇಷ್ಟೆಲ್ಲಾ ಶ್ರಮಪಟ್ಟು ಕಪಿಗಳಿಂದ ಸೇತುವೆಯನ್ನು ನಿರ್ಮಿಸುವ ಸಾಹಸ ಏಕೆ’ ಎಂದು ಪ್ರಶ್ನಿಸಿದ.
ಪ್ರಭು ಶ್ರೀರಾಮನು ಜಾಂಬವಂತನನ್ನು ಉದ್ದೇಶಿಸಿ ಹೇಳಿದ, `ಜಾಂಬವಂತ, ನಿನ್ನ ಸಂದೇಹ ನನಗೆ ಅರ್ಥವಾಯಿತು. ಎಲ್ಲವನ್ನೂ ನಾನೇ ಮಾಡಲು ಸಾಧ್ಯವಿರುವಾಗ ಸೇತುವೆ ನಿರ್ಮಾಣ ಮಾಡಲು ಕಪಿಗಳನ್ನು ಏಕೆ ತೊಡಗಿಸಿದೆ ಎಂದಲ್ಲವೇ? ಎಲ್ಲ ಕಪಿಗಳು ಮಾಡಿದ್ದು ತಮ್ಮ ಪುರುಷಾರ್ಥವನ್ನು ಅಂದರೆ ತಮ್ಮ ಕಾರ್ಯವನ್ನು. ಪುರುಷಾರ್ಥ ಎನ್ನುವುದು ಒಂದು ಹಂತದವರೆಗೆ ಮಾತ್ರ ಸಾಧ್ಯವಾಗುತ್ತದೆ. ಅದಕ್ಕೆ ನನ್ನ ಕೊಡುಗೆ ಕೇವಲ ಕೃಪೆ. ಕೃಪೆ ಸೀಮಾತೀತವಾದದ್ದು. ಪುರುಷಾರ್ಥದೊಂದಿಗೆ ಕೃಪೆಯು ಬೆರೆತಾಗ ಸಾರ್ಥಕ ಕಾರ್ಯವಾಗುತ್ತದೆ. ಅಂತೆಯೇ ಇಂದು ಕಪಿಗಳ ಪುರುಷಾರ್ಥಕ್ಕೆ ನನ್ನ ಕೃಪೆಯೂ ಸೇರಿ ಈ ಸೇತುವೆ ನಿರ್ಮಾಣವಾಗಿದೆ’ ಎಂದು ಹೇಳಿದನು.
ಅದೆಷ್ಟು ಸುಂದರವಾದ ಮಾತಲ್ಲವೇ ಸ್ನೇಹಿತರೆ? ಎಲ್ಲವೂ ದೇವರ ಕೃಪೆ, ಎಲ್ಲವನ್ನು ದೇವರೇ ಮಾಡುತ್ತಾನೆ ಎಂದು ಹೇಳಿ ನಾವು ಸುಮ್ಮನೆ ಕುಳಿತುಕೊಂಡರೆ ಕಾರ್ಯಸಿದ್ಧಿ ಆಗದು. ದೇವರು ಹೇಗಾದ್ರೂ ಪಾಸ್ ಮಾಡುತ್ತಾನೆ ಎಂದು ಪರೀಕ್ಷೆಗೆ ಓದದಿದ್ದರೆ ಪಾಸಾಗಲು ಸಾಧ್ಯವೇ?
ಇದಕ್ಕೆ ಪೂರಕವಾಗಿ ಇನ್ನೊಂದು ಕಥೆ ನೆನಪಿಗೆ ಬರುತ್ತದೆ. ದೇವರ ಮೇಲೆ ಅಪಾರ ಭಕ್ತಿಯುಳ್ಳ ಓರ್ವ ವ್ಯಕ್ತಿ ತನ್ನ ಊರಿಗೆ ನೆರೆ ಬಂದಾಗ ದೇವರನ್ನು ಕಾಪಾಡು ಎಂದು ಬೇಡಿಕೊಂಡನು. ದೇವರೇ ಬಂದು ತನ್ನನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಆತನದ್ದು. ಊರಿನವರೆಲ್ಲ ಆತನನ್ನು ದೋಣಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಪ್ರಯತ್ನಿಸಿದರಾದರೂ ಆತ ಒಪ್ಪಲಿಲ್ಲ. ಆತನನ್ನು ಬಿಟ್ಟು ಅವರು ಹೊರಟು ಹೋದರು.
ಕೆಲ ಸಮಯದ ನಂತರ ಮತ್ತೊಂದು ದೋಣಿಯಲ್ಲಿರುವ ಜನರು ಕೂಡ ಆತನನ್ನು ಬೇಗ ಬರುವಂತೆ ಕರೆದರೂ ಕೂಡ ಆತ `ಇಲ್ಲ, ದೇವರೇ ಬಂದು ನನ್ನನ್ನು ರಕ್ಷಿಸುತ್ತಾನೆ’ ಎಂದು ಹೇಳಿದ. ಅವರು ಕೂಡ ಆತನನ್ನು ಬಿಟ್ಟು ಹೊರಟು ಹೋದರು. ನೀರಿನ ಪ್ರವಾಹ ಏರುತ್ತಲೇ ಹೋಯಿತು ಮತ್ತೂ ಕೆಲ ಗಂಟೆಗಳ ನಂತರ ದೊಡ್ಡ ಮರದ ದಿಮ್ಮಿಯೊಂದು ಆತ ಕುಳಿತ ಕಟ್ಟಡದ ಬಳಿ ತೇಲುತ್ತಾ ಬಂದಿತ್ತು. ಅದರ ಮೇಲೆ ಆತ ಕುಳಿತರೆ ಇಲ್ಲವೇ ಅದನ್ನು ಹಿಡಿದುಕೊಂಡರೆ ಆತ ಮುಳುಗದೆ ಸುರಕ್ಷಿತ ದಡಕ್ಕೆ ಹೋಗಿ ಸೇರುವ ಸಾಧ್ಯತೆ ಇತ್ತು. ಆದರೂ ಕೂಡ ದೇವರು ಬರುತ್ತಾನೆ ಎಂಬ ನಿರೀಕ್ಷೆಯಲ್ಲಿ ಆತ ಹೋಗಲೇ ಇಲ್ಲ.
ಅಂತಿಮವಾಗಿ ನೆರೆಯ ಪ್ರವಾಹದಲ್ಲಿ ಕೊಚ್ಚಿ ಹೋದ ಆತ ಮರಣ ಹೊಂದಿದ.
ಮರಣದ ನಂತರ ಆತನ ಆತ್ಮ ದೇವಲೋಕಕ್ಕೆ ಬಂದಾಗ ಅಲ್ಲಿ ತನ್ನ ಇಷ್ಟದೈವವನ್ನು ಕಂಡ ಆ ವ್ಯಕ್ತಿ `ಇದೇನು ದೇವ, ನಾನು ನಿನ್ನನ್ನು ನಂಬಿದರೆ ನೀನು ನನ್ನ ಕೈ ಹಿಡಿದು ಕಾಪಾಡಲಿಲ್ಲ!? ಎಂದು ದೂರಿದ.
ಆಗ ದೇವರು ನಸುನಗುತ್ತಾ `ಮಗು, ನಾನು ನಿನ್ನನ್ನು ಕಾಪಾಡಲೆಂದೇ ಎರಡು ಬಾರಿ ದೋಣಿಯಲ್ಲಿ ಜನರನ್ನು ಕಳುಹಿಸಿದೆ, ಮೂರನೇ ಬಾರಿ ಮರದ ದಿಮ್ಮಿಯ ರೂಪದಲ್ಲಿ ನಿನ್ನ ಬಳಿ ಬಂದೆ ಆದರೆ ನೀನು ಬರಲಿಲ್ಲ. ನಿನ್ನ ಸ್ವ ಪ್ರಯತ್ನ ಇಲ್ಲದೆ ಹೋದರೆ ನಾನೇನು ಮಾಡಿದರೂ ಅದು ವಿಫಲವೇ ಆಗುತ್ತದೆ ಎಂಬುದು ನಿನಗೆ ಅರಿವಾಗಲೇ ಇಲ್ಲ’ ಎಂದು ಹೇಳಿದನು. ಇದೀಗ ಆ ವ್ಯಕ್ತಿಗೆ ತನ್ನ ತಪ್ಪಿನ ಅರಿವಾಯಿತು.
ಸ್ನೇಹಿತರೆ, ಇಲ್ಲಿ ನಾವು ಅರಿತುಕೊಳ್ಳಬೇಕಾಗಿರುವುದು ಎರಡು ವಿಷಯಗಳನ್ನು. ಒಂದು, ಸ್ವ ಪ್ರಯತ್ನದಿಂದ ಪುರುಷಾರ್ಥ ಸಾಧನೆ. ಎರಡನೆಯದಾಗಿ, ಭಗವಂತನ ಕೃಪೆ ನಮ್ಮ ಮೇಲಾಗುವುದು ನಮ್ಮ ಕಾರ್ಯನಿರ್ವಹಣೆಯ ಬಲದಿಂದಲೇ ಹೊರತು ಕೇವಲ ಮೊರೆ ಇಡುವುದರಿಂದ ಅಲ್ಲ ಎಂದು. ದೇವರು ಕೂಡ ನಮ್ಮ ಮೊರೆಯನ್ನು ಆಲಿಸುವುದು ನಾವು ಆತನನ್ನು ನಂಬುವುದರ ಜೊತೆ ಜೊತೆಗೆ ಶ್ರದ್ಧೆಯಿಂದ ಕಾರ್ಯ ತತ್ಪರರಾದಾಗ ಮಾತ್ರ ಎಂಬುದನ್ನು ಅರಿತು ಬದುಕಿನಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಾ ಹೋಗೋಣ.
– ವೀಣಾ ಹೇಮಂತ್ ಗೌಡ ಪಾಟೀಲ್.
ಮುಂಡರಗಿ.