ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿದ್ದು, ಶಿಕ್ಷಕರು ವಿಶೇಷ ಕಾಳಜಿ ವಹಿಸಿ ವಿದ್ಯಾರ್ಥಿಗಳಿಗೆ ಅತ್ಯಂತ ಆಕರ್ಷಕವಾಗಿ, ಅವರ ಮನಮುಟ್ಟುವಂತೆ ಪಾಠ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ತಿಳಿಸಿದರು.
ಅವರು ಮಂಗಳವಾರ ಶಿಗ್ಲಿಯ ಕೆ.ಜಿ. ಮುದಗಲ್ ಪ್ರೌಢಶಾಲೆಯಲ್ಲಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯಗಳ ವಿಷಯ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಶ್ನೆ ಪತ್ರಿಕೆ ರಚನಾ ಕಾರ್ಯಾಗಾರ ಹಾಗೂ ವಿಷಯ ಪರಿವಾರ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಕಡ್ಡಾಯವಾಗಿ ನೈಜತೆಯಿಂದ ಗುರುತಿಸಿ ವೈಯಕ್ತಿಕ ಕಾಳಜಿಯೊಂದಿಗೆ ಅವರಿಗೆ ಒಂದು ಗಂಟೆ ವಿಶೇಷ ತರಗತಿ ತೆಗೆದುಕೊಳ್ಳಬೇಕು. ಈ ಶೈಕ್ಷಣಿಕ ವರ್ಷದಲ್ಲಿ ನಮ್ಮ ಜಿಲ್ಲೆಯು ಉತ್ತಮ ಫಲಿತಾಂಶ ಬರುವಂತೆ ನೀವೆಲ್ಲರೂ ಕಾರ್ಯಪ್ರವೃತ್ತರಾಗಬೇಕು. ಶಿಕ್ಷಕ ವೃಂದದವರು ವಾರ್ಷಿಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಅದಕ್ಕೆ ಅನುಗುಣವಾಗಿ ಕಾರ್ಯನಿರತರಾಗಬೇಕು. ಶಿಕ್ಷಕರು ತಮ್ಮ ವಿಷಯದ ಮೇಲೆ ಪ್ರಭುತ್ವ ಹೊಂದುವ ಜತೆಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅವರ ಪ್ರೀತಿ-ವಿಶ್ವಾಸ ಗಳಿಸಿದರೆ ವಿದ್ಯಾರ್ಥಿಗಳ ಜಗತ್ತೇ ನೀವಾಗುತ್ತೀರಿ ಎಂದು ಮಾರ್ಗದರ್ಶನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಜಿ. ಮುದಗಲ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಲ್.ಎಸ್. ಅರಳಹಳ್ಳಿ ಮಾತನಾಡಿ, ಇಂತಹ ಕಾರ್ಯಾಗಾರಗಳಿಂದ ಎಲ್ಲ ವಿಷಯ ಶಿಕ್ಷಕರು ಒಂದೆಡೆ ಸೇರಿ ಸಮಗ್ರವಾಗಿ ಚಿಂತನೆಯನ್ನು ಮಾಡಿ, ಚರ್ಚಿಸಿ, ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮಗೊಳಿಸಲು, ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ ಎಂದರು.
ಮುಖ್ಯೋಪಾಧ್ಯಾಯರುಗಳಾದ ಎಸ್.ಕೆ. ಹವಾಲ್ದಾರ, ಕೆ.ವೈ. ಮೇಲಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಿ.ಬಿ. ಮೊಗಲಿ, ಇ.ಸಿ.ಓಗಳಾದ ಉಮೇಶ ಹುಚ್ಚಯ್ಯನಮಠ, ಹರೀಶ ಎಸ್, ಪ್ರೌಢ ವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ, ಪ್ರಕಾಶ ನಡುವಿನಹಳ್ಳಿ ಉಪಸ್ಥಿತರಿದ್ದರು. ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕುಗಳ ಕನ್ನಡ ಹಾಗೂ ಸಮಾಜವಿಜ್ಞಾನ ವಿಷಯಗಳ 100ಕ್ಕೂ ಹೆಚ್ಚು ಪ್ರೌಢಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು. ಶಿಕ್ಷಕರಾದ ಎಸ್.ಜಿ. ರಾಮೇನಹಳ್ಳಿ, ಎಂ.ಎಸ್. ಮಳಿಮಠ ನಿರ್ವಹಿಸಿದರು.
ಬರುವ ಮಾರ್ಚ್-ಏಪ್ರಿಲ್ ತಿಂಗಳು ಜರುಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸಲು ಇಲಾಖೆಯು 20 ಅಂಶಗಳ ಯೋಜನೆ ರೂಪಿಸಿದೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದ ವಿಷಯವಾರು ಪ್ರಶ್ನೆ ಪತ್ರಿಕೆ ರಚನಾ ಕಾರ್ಯಾಗಾರ ಹಾಗೂ ವಿಷಯ ಪರಿವಾರ ಸಭೆ ಕಾರ್ಯಾಗಾರವನ್ನು ತಾಲೂಕಿನನ ವಿವಿಧ ಶಾಲೆಗಳಲ್ಲಿ ನಡೆಸಲಾಗುವುದು. ನ.13ರಂದು ರಾಮಗಿರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಹಾಗೂ ನ. 15ರಂದು ಬೆಳ್ಳಟ್ಟಿಯ ಕೆಪಿಎಸ್ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ಎಚ್.ಎನ್. ನಾಯ್ಕ ತಿಳಿಸಿದರು.