ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಇದೀಗ ಆಟೋ ಚಾಲಕರ ಸಂಘದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಆರ್.ಆರ್ ನಗರದಲ್ಲಿರುವ ರಚಿತಾ ಅವರ ನಿವಾಸದ ಮುಂದೆ ನೂರಾರು ಆಟೋ ಚಾಲಕರು ಜಮಾಯಿಸಿ, ಅವರನ್ನು ಅಧಿಕೃತವಾಗಿ ಆಟೋ ಚಾಲಕರ ಸಂಘದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡುವ ಕಾರ್ಯಕ್ರಮ ಆಯೋಜಿಸಿದರು. ಈ ವೇಳೆ ರಚಿತಾ ರಾಮ್ ಖಾಕಿ ಶರ್ಟ್ ಧರಿಸಿ ಆಟೋ ಚಲಾಯಿಸಿ, ಚಾಲಕರ ಜೊತೆ ಫೋಟೋಗಳಿಗೆ ಪೋಸ್ ನೀಡಿದರು.
ಈ ಸಂತೋಷದ ಕ್ಷಣವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಹಂಚಿಕೊಂಡ ಅವರು, “ಅತಿರಥ ಮಹಾರಥ ಸಾರಥಿಗಳಿಗೆ ನನ್ನ ಸಮಸ್ಕಾರ. ನನ್ನನ್ನು ಆಟೋ ಚಾಲಕರ ಸಂಘದ ರಾಯಭಾರಿಯಾಗಿ ನೇಮಕ ಮಾಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ಮಹಿಳಾ ಆಟೋ ಚಾಲಕಿಯರ ಸಹಿತ ಅನೇಕ ಚಾಲಕರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ರಚಿತಾ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ತಮ್ಮ ಸರಳತೆ ಮತ್ತು ಉತ್ತಮ ನಡವಳಿಕೆಯಿಂದ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.


