ಮೈಸೂರು: ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಮೈಸೂರಿಗೆ ಬರುತ್ತಿದ್ದರೂ, ಈ ಭೇಟಿ ಸಂಪೂರ್ಣವಾಗಿ ‘ಟಚ್ ಅಂಡ್ ಗೋ’ ಆಗಿದೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಕೇವಲ 15 ನಿಮಿಷ ಮಾತ್ರ ಉಳಿಯಲಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಗಂಭೀರ ಚರ್ಚೆಗೆ ಅವಕಾಶವೇ ಇಲ್ಲದಂತಾಗಿದೆ.
ಮಧ್ಯಾಹ್ನ 2:20ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಲ್ಯಾಂಡ್ ಆಗಲಿರುವ ರಾಹುಲ್, ತಕ್ಷಣವೇ ಹೆಲಿಕಾಪ್ಟರ್ ಮೂಲಕ ತಮಿಳುನಾಡಿನ ಗುಡ್ಲುರಿಗೆ ತೆರಳಲಿದ್ದಾರೆ. ಅಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಸಂಜೆ 5:45ಕ್ಕೆ ಮತ್ತೆ ಮೈಸೂರಿಗೆ ಮರಳಿ, ಸಂಜೆ 6 ಗಂಟೆಗೆ ದೆಹಲಿಗೆ ಹಾರಾಟ ನಡೆಸಲಿದ್ದಾರೆ.
ಇಡೀ ವೇಳಾಪಟ್ಟಿ ನೋಡಿದರೆ, ಮೈಸೂರು ಭೇಟಿ ಸಂಪೂರ್ಣವಾಗಿ ತಾಂತ್ರಿಕ ನಿಲ್ದಾಣದಂತೆ ಮಾತ್ರ ಸೀಮಿತವಾಗಿದ್ದು, ಕಾಂಗ್ರೆಸ್ ಒಳಾಂಗಣ ರಾಜಕೀಯ, ರಾಜ್ಯದ ಮಹತ್ವದ ವಿಚಾರಗಳ ಬಗ್ಗೆ ಯಾವುದೇ ಚರ್ಚೆ ನಡೆಯುವ ಸಾಧ್ಯತೆ ಇಲ್ಲ ಎನ್ನುವುದು ಸ್ಪಷ್ಟವಾಗಿದೆ.



