ಬೆಂಗಳೂರು: ರಾಜ್ಯದಲ್ಲಿ ಸಹಕಾರ ಇಲಾಖೆ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಎನ್. ರಾಜಣ್ಣ ನೀಡಿದ ಒಂದೇ ಹೇಳಿಕೆಯಿಂದಾಗಿ ಸಚಿವ ಸ್ಥಾನದಿಂದ ವಜಾಗೊಂಡಿದ್ದರು. ಈ ಘಟನೆಗೆ ತೀವ್ರ ಅಸಮಾಧಾನಗೊಂಡಿರುವ ಹಿರಿಯ ನಾಯಕ ರಾಜಣ್ಣ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 8 ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ.
ರಾಜಣ್ಣ ತಮ್ಮ ಹೇಳಿಕೆಯನ್ನು ತಿರಸ್ಕರಿಸಿ ಹರಡಿದವರಿಗೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದರ ಜೊತೆಗೆ, ದೆಹಲಿಗೆ ಬಂದು ನೇರವಾಗಿ ಮಾತಾಡಲು ಅವಕಾಶ ನೀಡುವಂತೆ ಪತ್ರದಲ್ಲಿ ವಿನಂತಿಸಿದ್ದಾರೆ. ಕಳೆದ ತಿಂಗಳ 17ರಂದು ಈ ಪತ್ರವನ್ನು ಇ-ಮೇಲ್ ಮೂಲಕ ರವಾನಿಸಲಾಗಿದೆ. ಪತ್ರದಲ್ಲಿ ರಾಜಣ್ಣ ಮಾಧ್ಯಮಗಳ ಮುಂದೆ ಹೇಳಿದ ಮಾತುಗಳು ಮತ್ತು ಬಂದ ಪ್ರಶ್ನೆಗಳ ವಿವರಗಳನ್ನು ಉಲ್ಲೇಖಿಸಿದ್ದಾರೆ.
“ನನ್ನ ಹೇಳಿಕೆಯ ಹಿಂದಿರುವ ಸತ್ಯವನ್ನು ತಿರಸ್ಕರಿಸಿ ನಿಮ್ಮ ಮುಂದೆ ತಪ್ಪು ಮಾಹಿತಿಯನ್ನು ನೀಡಲಾಗಿದೆ. ಈ ಹಿಂದೆ ಇರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು” ಎಂದು ರಾಜಣ್ಣ ಒತ್ತಾಯಿಸಿದ್ದಾರೆ.
ಪತ್ರದಲ್ಲಿ ಸಂಘಟನಾತ್ಮಕ ಲೋಪಗಳ ಬಗ್ಗೆ ಕೂಡ ಗಂಭೀರವಾಗಿ ಪ್ರಸ್ತಾಪಿಸಿದ್ದಾರೆ. “ಕೆಪಿಸಿಸಿ ನೇಮಕ ಮಾಡಿದ ಬಿಎಲ್‌ಎಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಈ ಲೋಪಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಗಮನ ಹರಿಸಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು. ಈ ಲೋಪಗಳನ್ನು ಸರಿಪಡಿಸಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಇನ್ನೂ 8–10 ಸ್ಥಾನಗಳನ್ನು ಹೆಚ್ಚಾಗಿ ಸುಲಭವಾಗಿ ಗೆಲ್ಲಬಹುದಾಗಿತ್ತು ಎಂದು ಹೇಳಿದ್ದಾರೆ.
ತಮ್ಮ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿ ಸಚಿವ ಸ್ಥಾನ ತಪ್ಪುವಂತೆ ಮಾಡಿದವರ ಮುಖವಾಡ ಕಳಚಲು ರಾಜಣ್ಣ ತುದಿಗಾಲಲ್ಲಿ ನಿಂತಿದ್ದಾರೆ. ‘ನನ್ನ ಹೇಳಿಕೆಯ ಉದ್ದೇಶ ಪಕ್ಷವನ್ನು ಬಲಪಡಿಸುವುದೇ ಹೊರತು ಹಾನಿ ಮಾಡುವುದಲ್ಲ. ಈ ಎಲ್ಲ ವಿಷಯಗಳ ಬಗ್ಗೆ ನಾನು ನೇರವಾಗಿ ನಿಮ್ಮೊಂದಿಗೆ ಚರ್ಚಿಸಬೇಕಿದೆ. ದೆಹಲಿಗೆ ಬಂದು ಮಾತನಾಡಲು ಸಮಯ ನಿಗದಿಪಡಿಸಿ’ ಎಂದು ರಾಹುಲ್ ಗಾಂಧಿಯವರಲ್ಲಿ ವಿನಂತಿಸಿದ್ದಾರೆ.



