ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: : ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವನ್ನು ಇಲ್ಲಿಯ ಮುಸ್ಲಿಂ ಜಮಾತ್ (ಆಡಳಿತ)ಅಂಜುಮನ್ ಏ ಇಸ್ಲಾಂ ಕಮಿಟಿಯ ಆಶ್ರಯದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಇಲ್ಲಿಯ ಹಿರೇ ಮಸೂತಿಯಿಂದ ಬಜಾರ ರಸ್ತೆಯ ಮೂಲಕ ಮೆರವಣಿಗೆ ಮುಖಾಂತರ ಹಾತಲಗೇರಿ ರಸ್ತೆಯಲ್ಲಿ ಇರುವ ದರ್ಗಾಕ್ಕೆ ಬಂದು ಎಲ್ಲ ಮುಸ್ಲಿಂ ಭಾಂದವರು ಸೇರಿದರು. ಮೌಲಾನ ಸಲೀಂ ಅಹ್ಮದ ಅವರ ನೇತೃತ್ವದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಲೀಂ ಅಹ್ಮದ, ಪವಿತ್ರ ರಂಜಾನ್ ಹಬ್ಬವನ್ನು ಅತ್ಯಂತ ಪವಿತ್ರತೆಯಿಂದ ಆಚರಿಸಿದ ಜೀವನ ಪರ್ಯಂತ ದಾನ, ಧರ್ಮ ಹಾಗೂ ಸಮಾಜಮುಖಿಯಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಮುಸ್ಲೀಂ ಜಮಾತ್ (ಆಡಳಿತ) ಅಂಜುಮನ್ ಏ ಇಸ್ಲಾಂ ಕಮಿಟಿಯ ಅಧ್ಯಕ್ಷ ನಜೀರಅಹ್ಮದ ಕಿರೀಟಗೇರಿ, ಉಪಾಧ್ಯಕ್ಷ ದಾದಾಪೀರ ಕೊರ್ಲಹಳ್ಳಿ, ಕಾರ್ಯದರ್ಶಿ ವಾಶೀಂಖಾನ್ ಮಸೂತಿಮನಿ, ಗ್ರಾ.ಪಂ ಸದಸ್ಯ ಪೀರಸಾಬ ನದಾಫ ಸೇರಿದಂತೆ ಸರ್ವ ಮುಸ್ಲಿಂ ಬಾಂಧವರು ಹಾಜರಿದ್ದರು.