ಗುವಾಹಟಿ: ಅಸ್ಸಾಂನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿಯಂತ್ರಣ ಮೀರಿ ಸಾಗಿದ್ದು, ಒಂದೇ ದಿನ 21 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ವರ್ಷದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ರಾಜ್ಯದ 16 ಜಿಲ್ಲೆಗಳ 5.64 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದು, ಸಾವಿರಾರು ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿವೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಶಿವಸಾಗರ್ ಜಿಲ್ಲೆಯಲ್ಲಿ ಅತಿ ಹೆಚ್ಚು 13 ಮಂದಿ ಮೃತಪಟ್ಟಿದ್ದಾರೆ. ಚರೈದಿಯೋದಲ್ಲಿ ಐವರು, ಗೋಲಾಘಾಟ್ನಲ್ಲಿ ಇಬ್ಬರು ಹಾಗೂ ಜೋರ್ಹಾಟ್ನಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಶಿವಸಾಗರ್ನಲ್ಲಿ 3.59 ಲಕ್ಷಕ್ಕೂ ಹೆಚ್ಚು, ಜೋರ್ಹಾಟ್ನಲ್ಲಿ 87 ಸಾವಿರಕ್ಕೂ ಹೆಚ್ಚು ಹಾಗೂ ಚರೈದಿಯೋದಲ್ಲಿ 72 ಸಾವಿರಕ್ಕೂ ಅಧಿಕ ಮಂದಿ ಪ್ರವಾಹದಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಪ್ರವಾಹ ಪೀಡಿತ ಚರೈದಿಯೋ, ನಜಿರಾ, ಶಿವಸಾಗರ್, ಸೋನಾರಿ, ಜೋರ್ಹಾಟ್ ಹಾಗೂ ತಿಯೋಕ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿದರು. ರಕ್ಷಣಾ ಕಾರ್ಯಗಳನ್ನು ಮತ್ತಷ್ಟು ವೇಗಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಸ್ತುತ 44 ಆದಾಯ ವಲಯಗಳ ವ್ಯಾಪ್ತಿಯ 872 ಗ್ರಾಮಗಳು ಜಲಾವೃತವಾಗಿದ್ದು, 71 ಪರಿಹಾರ ಶಿಬಿರಗಳಲ್ಲಿ 12,284 ಮಂದಿ ಆಶ್ರಯ ಪಡೆದಿದ್ದಾರೆ. 202 ಪರಿಹಾರ ವಿತರಣಾ ಕೇಂದ್ರಗಳ ಮೂಲಕ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ.
ಶಿವಸಾಗರ್ ಜಿಲ್ಲೆಯ ದಿಖೌ ಮತ್ತು ದಿಸಾಂಗ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬ್ರಹ್ಮಪುತ್ರ ಸೇರಿದಂತೆ ಹಲವು ಪ್ರಮುಖ ನದಿಗಳಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ಭಾರತೀಯ ವಾಯುಪಡೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ಪ್ರವಾಹದ ಪರಿಣಾಮ ಸಿಮಾಲುಗುರಿ ಪ್ರದೇಶದಲ್ಲಿ ರೈಲು ಹಳಿಗಳು ಜಲಾವೃತವಾಗಿದ್ದು, ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತವಾಗದಂತೆ ಶಿವಸಾಗರ್, ಚರೈದಿಯೋ ಹಾಗೂ ಜೋರ್ಹಾಟ್ ಜಿಲ್ಲೆಗಳಲ್ಲಿ ಜುಲೈ 24ರವರೆಗೆ ಇಂಟ್ರಾ-ಸರ್ಕಲ್ ರೋಮಿಂಗ್ ವ್ಯವಸ್ಥೆಯನ್ನು ಕೇಂದ್ರ ದೂರಸಂಪರ್ಕ ಇಲಾಖೆ ಜಾರಿಗೆ ತಂದಿದೆ.



