ಬೆಂಗಾಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಆಂಧ್ರ ಪ್ರದೇಶ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಾಲ್ ತಂಡದ ನಾಯಕ ಅಭಿಮನ್ಯು ಈಶ್ವರನ್ ಮೊದಲು ಬೌಲಿಂಗ್ ಆಯ್ದುಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಆಂಧ್ರ ಪ್ರದೇಶ ತಂಡವು ಪ್ರಥಮ ಇನಿಂಗ್ಸ್ನಲ್ಲಿ 295 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಬೆಂಗಾಲ್ ತಂಡ ಭರ್ಜರಿ ಪ್ರದರ್ಶನ ತೋರಿತು. ತಂಡದ ಪರ ಸುದೀಪ್ ಕುಮಾರ್ ದ್ವಿಶತಕ ಸಿಡಿಸಿ ಇನಿಂಗ್ಸ್ಗೆ ಆಧಾರ ನೀಡಿದರು. ಸುಮಂತ ಗುಪ್ತಾ 81 ರನ್ಗಳ ಸಹಾಯಕ ಇನಿಂಗ್ಸ್ ಆಡಿದರೆ, ಶಕೀರ್ ಹಬೀಬಿ 95 ರನ್ಗಳೊಂದಿಗೆ ಶತಕದಂಚಿಗೆ ತಲುಪಿದರು.
ಕೆಳ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದ ಮೊಹಮ್ಮದ್ ಶಮಿ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಕೇವಲ 33 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 7 ಫೋರ್ಗಳ ನೆರವಿನಿಂದ 53 ರನ್ ಚಚ್ಚಿ ಅರ್ಧಶತಕ ಪೂರೈಸಿದರು. ಶಮಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೆಂಗಾಲ್ ತಂಡವು ಮೊದಲ ಇನಿಂಗ್ಸ್ನಲ್ಲಿ ಒಟ್ಟು 629 ರನ್ ಕಲೆಹಾಕಿತು.
ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಂಧ್ರ ಪ್ರದೇಶ ತಂಡವು 30 ಓವರ್ಗಳ ಅಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿದೆ. ಐದನೇ ದಿನದಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಂದ್ಯ ಡ್ರಾಗೊಳ್ಳುವ ಅಥವಾ ಬೆಂಗಾಲ್ ತಂಡ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ.
ಈ ಪರಿಸ್ಥಿತಿಯಲ್ಲಿ ಮೂರನೇ ಕ್ವಾರ್ಟರ್ ಫೈನಲ್ ಮೂಲಕ ಬೆಂಗಾಲ್ ತಂಡವು ಸೆಮಿಫೈನಲ್ಗೆ ಅರ್ಹತೆ ಪಡೆಯುವ ನಿರೀಕ್ಷೆ ಮೂಡಿದೆ.



