ಶೈಕ್ಷಣಿಕವಾಗಿ ಪ್ರಗತಿ ಹೊಂದುವದು ಮುಖ್ಯ : ಡಾ. ರೇಣುಕಾ ರಾವ್

0
Ravina Somappa Lamani
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಬಂಜಾರ ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವದು ಅವಶ್ಯವಾಗಿದೆ. ಇಂದಿನ ದಿನಮಾನಗಳಲ್ಲಿ ಶಿಕ್ಷಣವು ಹೆಚ್ಚು ಮಹತ್ವ ಪಡೆದುಕೊಂಡಿದ್ದರಿಂದ ಎಲ್ಲರೂ ಶೈಕ್ಷಣಿಕವಾಗಿ ಪ್ರಗತಿ ಹೊಂದುವದು ಮುಖ್ಯ ಎಂದು ಗೋವಾದ ಜೀವನ ಹೆಲ್ತ್ಕೇರ್ ನರ್ಸಿಂಗ್ ಬ್ಯುರೋ ಏಜೆನ್ಸಿ ಮುಖ್ಯಸ್ಥೆ ಡಾ. ರೇಣುಕಾ ರಾವ್ ಹೊನ್ನಳ್ಳಿ ಹೇಳಿದರು.

Advertisement

ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಕೀರ್ತಿ ತಂದ ಆದರಳ್ಳಿ ಗ್ರಾಮದ ರವಿನಾ ಸೋಮಪ್ಪ ಲಮಾಣಿ ಅವರನ್ನು ಸನ್ಮಾನಿಸಲು ಗೋವಾದಿಂದ ಆಗಮಿಸಿ ಕಾರ್ಯಕ್ರಮದಲ್ಲಿ ರವಿನಾಳಿಗೆ ಶುಭ ಹಾರೈಸಿ ಅವರು ಮಾತನಾಡಿದರು.

ಲಂಬಾಣಿ ಸಮಾಜದ ಹೆಣ್ಣುಮಕ್ಕಳು ಶಿಕ್ಷಣದ ಕಡೆ ಗಮನ ಕೊಟ್ಟು ಸಮಾಜದ ಗೌರವವನ್ನು ಹೆಚ್ಚಿಸಬೇಕು. ರವಿನಾಳ ತಂದೆ-ತಾಯಿ ಓದದೆ ಇದ್ದರೂ ಮಗಳನ್ನು ಕಷ್ಟಪಟ್ಟು ಓದಿಸಿ ಈ ಮಟ್ಟಕ್ಕೆ ತಂದಿದ್ದು ಹೆಮ್ಮೆಯ ವಿಷಯವಾಗಿದೆ. ಸಾಧನೆಗೆ ಬಡತನ ಅಡ್ಡಿಯಾಗದು ಎಂಬುದಕ್ಕೆ ಈ ವಿದ್ಯಾರ್ಥಿನಿ ಸಾಕ್ಷಿಯಾಗಿದ್ದಾಳೆ.

ಇವಳನ್ನು ಸ್ಪೂರ್ತಿಯಾಗಿ ಪಡೆದುಕೊಂಡು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಮಕ್ಕಳು ಮೊಬೈಲ್ ಗೀಳಿನಿಂದ ಹೊರ ಬಂದರೆ ಜೀವನದಲ್ಲಿ ಸಾಧನೆ ಮಾಡಬಹುದು. ರವಿನಾಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಧಕ ವಿದ್ಯಾರ್ಥಿನಿ ರವಿನಾ ಲಮಾಣಿ, ದೂರದ ಗೋವಾ ರಾಜ್ಯದಿಂದ ಬಂದು ಸನ್ಮಾನ ಮಾಡುತ್ತಿರುವುದು ಅತೀವ ಸಂತೋಷವಾಗಿದೆ. ಸನ್ಮಾನಗಳೇ ಮುಂದಿನ ಸಾಧನೆಗೆ ಪ್ರೇರಣೆ ಆಗುವಂತಿದೆ. ತಂದೆ-ತಾಯಿಯವರ ಕೃಪೆಯಿಂದ, ಗುರುಹಿರಿಯರ ಆಶೀರ್ವಾದ, ಶುಭ ಹಾರೈಕೆಯಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ನನ್ನ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವದಾಗಿ ಹೇಳಿದಳು.

ಈ ಸಂದರ್ಭದಲ್ಲಿ ಸಮಂತಾ ಎಚ್, ಸೋಮಪ್ಪ ಲಮಾಣಿ, ರೇಣವ್ವ ಲಮಾಣಿ, ನಾರಾಯಣ ಲಮಾಣಿ, ಸುದೀಪ ಲಮಾಣಿ, ವೆಂಕಟೇಶ ಲಮಾಣಿ, ರೇಷ್ಮಾ ಲಮಾಣಿ ಸೇರಿದಂತೆ ಗ್ರಾಮದ ಅನೇಕ ಹಿರಿಯರು, ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here