ನವದೆಹಲಿ: ದೆಹಲಿಯ ರೆಡ್ ಫೋರ್ಟ್ ಮೆಟ್ರೋ ಸ್ಟೇಷನ್ ಬಳಿ ನಡೆದ ಭಯಂಕರ ಕಾರು ಸ್ಫೋಟದಲ್ಲಿ 10 ಜನ ಸಾವು, 24 ಗಾಯಗಳ ನಂತರ ಹೊಸ ತಿರುವುಗಳು ಬಯಲಾಗುತ್ತಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕರಣವನ್ನು ಕೈಗೆತ್ತಿಕೊಂಡು ತೀವ್ರ ತನಿಖೆ ನಡೆಸುತ್ತಿದ್ದು, ಕಾಶ್ಮೀರದಿಂದ 5 ಆರೋಪಿಗಳನ್ನು ಬಂಧಿಸಿದೆ.
Advertisement
ಈ ನಡುವೆ ದೆಹಲಿಯ ಲೋಕ ನಾಯಕ್ ಜೈ ಪ್ರಕಾಶ್ (ಎಲ್ಎನ್ಜೆಪಿ) ಆಸ್ಪತ್ರೆಗೆ ತೆರಳಿ ಕೆಂಪು ಕೋಟೆ ಬಳಿಯ ಕಾರು ಸ್ಫೋಟದ ಸಂತ್ರಸ್ತರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಭೂತಾನ್ ಪ್ರವಾಸಕ್ಕೆ ತೆರಳಿದ್ದ ಮೋದಿ ಇಂದು ದೆಹಲಿಗೆ ವಾಪಾಸ್ ಬರುತ್ತಿದ್ದಂತೆ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿಯಾಗಿದ್ದಾರೆ.
ಪ್ರಧಾನಿ ಮೋದಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಆಸ್ಪತ್ರೆಯ ಅಧಿಕಾರಿಗಳು ಮತ್ತು ವೈದ್ಯರು ಸಹ ಗಾಯಾಳುಗಳ ಆರೋಗ್ಯ ಸ್ಥಿತಿಯ ಬಗ್ಗೆ ಮೋದಿಯವರಿಗೆ ಮಾಹಿತಿ ನೀಡಿದರು. ಈ ಹಿಂದೆ ಅಮಿತ್ ಶಾ ಕೂಡ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿಯಾಗಿದ್ದರು.
ಸೋಮವಾರ ಸಂಜೆ ಕೆಂಪು ಕೋಟೆ ಪ್ರದೇಶವನ್ನು ಬೆಚ್ಚಿಬೀಳಿಸಿದ ದಾಳಿಗೆ ಕಾರಣರಾದವರನ್ನು ಪತ್ತೆಹಚ್ಚಲು ಸರ್ಕಾರ ಪ್ರತಿಜ್ಞೆ ಮಾಡಿದೆ. ದೆಹಲಿಯಲ್ಲಿ ಬಿಳಿ ಹುಂಡೈ ಐ20 ಕಾರಿನಲ್ಲಿ ಸಂಭವಿಸಿದ ಪ್ರಬಲ ಸ್ಫೋಟದ ಸಾವಿನ ಸಂಖ್ಯೆ 10ಕ್ಕೆ ಏರಿದೆ.
ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ಸಂಶೋಧನೆಗಳು ಮೂಳೆ ಮುರಿತ, ತಲೆಗೆ ಗಾಯ ಮತ್ತು ಶ್ವಾಸಕೋಶ ಮತ್ತು ಕರುಳು ಛಿದ್ರಗೊಂಡಿರುವುದು ಸೇರಿದಂತೆ ದೇಹದ ಮೇಲ್ಭಾಗದ ತೀವ್ರವಾದ ಗಾಯಗಳನ್ನು ಬಹಿರಂಗಪಡಿಸಿವೆ. ಇವೆಲ್ಲವೂ ಹೆಚ್ಚಿನ ತೀವ್ರತೆಯ ಸ್ಫೋಟದ ಪರಿಣಾಮದಿಂದ ಆಗಿದೆ.