ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದ ಈಗಿನ ಓಟಿಎಸ್ ಪದ್ಧತಿಯ ವಿರುದ್ಧ ರಾಜ್ಯ ಯೂನಿಯನ್ ಆಫ್ ಕರ್ನಾಟಕ ಸ್ಪೋನ್ ಕ್ರಷರ್ ಮಾಲೀಕರಿಂದ ಹಲವು ಬಾರಿ ಸರ್ಕಾರಕ್ಕೆ ಹಾಗೂ ಇಲಾಖೆಗೆ ಮನವಿ ಮಾಡಲಾಗಿದೆ. ಆದರೆ, ಅಧಿಕಾರಿಗಳ ತಪ್ಪು ಮಾಹಿತಿಯಿಂದ ಈಗಾಗಲೇ ರಾಜಧನ ಡಬ್ಲ್ಯೂಇಡಿಎಎಸ್ ಸರ್ಕಾರದ ಕಾಮಗಾರಿಗಳಿಂದ ರಾಜಧನ ಭರ್ತಿಯಾಗಿದ್ದು, ಓಟಿಎಸ್ ಪದ್ಧತಿಯಂತೆ ದಂಡ ವಿಧಿಸಿ ಮಾಲೀಕರಿಗೆ ತುಂಬಲಾರದ ಹೊರೆಯನ್ನು ಹಾಕಿದೆ. ಈ ಪದ್ಧತಿಗೆ ನಮ್ಮ ಸಂಘವು ಕಲ್ಲುಗಣಿ ಗುತ್ತಿಗೆದಾರರ ಪರವಾಗಿ ವಿರೋಧ ವ್ಯಕ್ತಪಡಿಸುತ್ತದೆ ಎಂದು ಜಿಲ್ಲಾ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ರಾಮಣ್ಣ ಕಾಮೋಜಿ ಹೇಳಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಲುಗಣಿಗೆ ವಿಧಿಸಿದ ೫5ಪಟ್ಟು ದಂಡವನ್ನು ವಜಾಗೊಳಿಸಿ ಹೆಕ್ಟೇರ್‌ಗೆ 5 ಲಕ್ಷಗಳವರೆಗೆ ದಂಡ ವಿಧಿಸಿ ಈ ಪ್ರಕರಣವನ್ನು ಅಂತ್ಯಗೊಳಿಸಬೇಕು. ಕಲ್ಲುಣಿಯಿಂದ ತೆಗೆದ ಸರಕು ಅಥವಾ ಸ್ಟೋನ್ ಕ್ರಷರ್‌ನಿಂದ ಹೋದ ಸರಕು ಸರ್ಕಾರಿ ಕಾಮಗಾರಿಗಳಿಗೆ ಹೋಗಿರುತ್ತದೆ. ಇಲ್ಲಿಂದ ರಾಜಧನ ಬಂದಿರುತ್ತದೆ. ಮತ್ತು ವರ್ಷ ವರ್ಷ ಕಲ್ಲುಗಣಿ ಆಡಿಟ್ ಸಹ ಆಗಿರುತ್ತದೆ. ಹೀಗಿರುವಾಗ ಯಾವ ರೀತಿಯಿಂದ ದಂಡ ಹಾಕುತ್ತಿದ್ದೀರಿ ಎಂಬ ವಿಷಯ ಇನ್ನೂ ತಿಳಿದಿಲ್ಲ. ನಾವು ಕಟ್ಟುವ ರಾಜಧನ ಈಗಾಗಲೇ ಗುತ್ತಿಗೆದಾರರಿಂದ ಸರ್ಕಾರಕ್ಕೆ ಜಮಾ ಆಗುತ್ತಾ ಬಂದಿದೆ. ಆದ್ದರಿಂದ ನಮ್ಮ ಕಲ್ಲುಗಣಿಗೆ ಹಾಕಿದ ದಂಡದ ಬಾಬತ್ತನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ಕೆಎಂಎಂಸಿಆರ್ ನಿಯಮದಲ್ಲಿ 5 ಪಟ್ಟು ದಂಡದ ವಿಷಯವನ್ನು ತೆಗೆದು ಹೆಕ್ಟೇರ್‌ಗೆ 5 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬೇಕು ಮತ್ತು ತಿದ್ದುಪಡಿ ಮಾಡಿ ಸರಳೀಕರಣ ಮಾಡಿಕೊಡಬೇಕು. ಅವೈಜ್ಞಾನಿಕವಾಗಿ ಸ್ಟೋನ್ ಕ್ರಷರ್‌ನಿಂದ ವಿದ್ಯುಚ್ಛಕ್ತಿ ಬಿಲ್ ಪಡೆಯುವುದನ್ನು ತಕ್ಷಣ ನಿಲ್ಲಿಸಬೇಕು. ಕಲ್ಲುಗಣಿ ಮತ್ತು ಸ್ಟೋನ್ ಕ್ರಷರ್‌ನಿಂದ ಸರಕು ಸರಬರಾಜು ಮಾಡುವ ಲಾರಿಗಳಿಗೆ ಅಳವಡಿಸಲು ಸೂಚಿಸಿದ ಜಿಪಿಎಸ್ ಸಿಸ್ಟಮ್ ಅನ್ನು ತೆಗೆಯಬೇಕು ಎಂದರು.
ರಾಜಧನವು ರಾಜ್ಯದಲ್ಲಿ ಡ್ಯೂಯಲ್ ಪಾಲಿಸಿಯಾಗಿ ಕಲೆಕ್ಟ್ ಆಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಿ. ಈ ರಾಜಧನವನ್ನು ಕಲ್ಲುಗಣಿ ಗುತ್ತಿಗೆದಾರರಿಂದ ಅಥವಾ ಸರ್ಕಾರಿ ಕಾಮಗಾರಿ ಗುತ್ತಿಗೆದಾರರಿಂದ ಯಾರಾದರೂ ಒಬ್ಬರ ಕಡೆಯಿಂದ ರಾಜಧನವನ್ನು ಪಡೆಯಬೇಕು ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಎಂ.ಡಿ. ಬಟ್ಟೂರ, ಅಶೋಕ ಸೋನಬೊಜಿ, ರಾಮಕೃಷ್ಣ, ಎಂ.ಎಂ. ದಾಯಮ್ಮನವರ, ಬಸವರಾಜ ರಾಯಪ್ಪನವರ, ನಾಗರಾಜ ನೀಲಗುಂದ, ಗಣೇಶ ಬಂಕಾಪೂರ, ಸಿದ್ದೇಶ್ ಯಲ್ಲಾಪೂರ, ಶಿವಾನಂದ ಪಲ್ಲೇದ, ಸುರೇಂದ್ರ ರೆಡ್ಡಿ, ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.
ಬೇಡಿಕೆಗಳು
* ರಾಜ್ಯದಲ್ಲಿ ಪಟ್ಟಾ ಭೂಮಿಯಲ್ಲಿ ಕಲ್ಲುಗಣಿಗಾರಿಕೆ ಮಾಡುವವರಿಗೆ ಸಂಪೂರ್ಣ ರಾಜಧನ ತೆಗೆಯಬೇಕು.
* ಕಲ್ಲುಗಣಿ ಗುತ್ತಿಗೆ ಅವಧಿ 30 ವರ್ಷಗಳಿಂದ 50 ವರ್ಷಕ್ಕೆ ಡಿಮೇಡ್ ಎಕ್ಸ್ ಟೆನ್ಷನ್ ಮಾಡಿಕೊಡಬೇಕು.
* ಸ್ಟೋನ್ ಕ್ರಷರ್ ಲೈಸೆನ್ಸ್ ಫಾರಂ ಸಿ ಅವಧಿಯನ್ನು 50 ವರ್ಷಗಳವರೆಗೆ ಡೀಮೆಡ್ ಎಕ್ಸ್ ಟೆನ್ಷನ್ ಮಾಡಿಕೊಡಬೇಕು.
ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲಕರು ಸರ್ಕಾರದ ಎಲ್ಲ ನಿಯಮಗಳ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಸರ್ಕಾರ ಪದೇ-ಪದೆ ನಮ್ಮ ಮೇಲೆ ಗಧಾ ಪ್ರಹಾರ ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಕಂಪನಿಗಳು ಯಾವುದೇ ನಿಯಮ ಅನುಸರಿಸುತ್ತಿಲ್ಲ. ಸರ್ಕಾರದ ದ್ವಿಮುಖ ನೀತಿಯನ್ನು ಕೈಬಿಟ್ಟು ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲಕರ ಹಿತ ಕಾಪಾಡಬೇಕು.
– ವಿಜಯಕುಮಾರ ಗಡ್ಡಿ.
ಉದ್ಯಮಿ.