ವಿಜಯಸಾಕ್ಷಿ ಸುದ್ದಿ, ಬೇಲೂರು : ಮಾನವ ಯಾವಾಗಲೂ ಸುಖಾಪೇಕ್ಷಿ. ಸಂತೃಪ್ತಿ, ಸಮೃದ್ಧಿಗಾಗಿ ಜೀವನ ಮೌಲ್ಯಗಳನ್ನು ಪಾಲಿಸಬೇಕಾಗುತ್ತದೆ. ಜೀವನದ ಶ್ರೇಯಸ್ಸಿಗಾಗಿ ಧರ್ಮ ದಿಕ್ಸೂಚಿ. ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಧರ್ಮಾಚರಣೆ ಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ತಾಲೂಕಿನ ಬಿಕ್ಕೋಡು ಸಮೀಪದ ಮುಚ್ಚಿನಮನೆ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರಸ್ವಾಮಿ ದೇವಾಲಯದ ಪ್ರತಿಷ್ಠಾಪನಾ ಪ್ರಥಮ ಮಂಡಲೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಂಪತ್ತು ಹೆಚ್ಚಿದಂತೆಲ್ಲ ಮಾನವೀಯ ಸಂಬಂಧಗಳು ಉಳಿಯುತ್ತಿಲ್ಲ. ಬೆಟ್ಟಕ್ಕೆ ಬೆಟ್ಟದ ಅವಶ್ಯಕತೆ ಇಲ್ಲದಿರಬಹುದು. ಆದರೆ ಮನುಷ್ಯನಿಗೆ ಮನುಷ್ಯನ ಅವಶ್ಯಕತೆ ಇದ್ದೇ ಇದೆ. ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಒಂದಿಷ್ಟಾದರೂ ಧರ್ಮಪ್ರಜ್ಞೆ ಮತ್ತು ರಾಷ್ಟçಪ್ರಜ್ಞೆ ಇರಬೇಕಾಗುತ್ತದೆ. ದೇವರು ಧರ್ಮ ಮತ್ತು ಶ್ರೀ ಗುರುವಿನಲ್ಲಿ ಅಚಲ ನಿಷ್ಠೆ ಶ್ರದ್ಧೆಯಿರಲಿ. ಬೆಳೆಯುವ ಯುವ ಜನಾಂಗದಲ್ಲಿ ವೈಚಾರಿಕತೆಯಿರಲಿ. ಆದರೆ ನಾಸ್ತಿಕ ಮನೋಭಾವ ಬೆಳೆದುಕೊಂಡು ಬರಬಾರದು. ನಾಗರಿಕತೆಯ ಸಮಾಜದಲ್ಲಿ ಅನಾಗರಿಕ ವರ್ತನೆಗಳು ನಡೆಯುತ್ತಿರುವುದು ಒಳ್ಳೆಯ ಲಕ್ಷಣವಲ್ಲ ಎಂದರು.
ಅಧ್ಯಕ್ಷತೆ ವಹಿಸಿದ ಶಾಸಕ ಹೆಚ್.ಕೆ. ಸುರೇಶ್ ಮಾತನಾಡಿ, ಧರ್ಮದ ದಾರಿ ಮೋಕ್ಷಕ್ಕೆ ಹೆದ್ದಾರಿ. ಹಣವಂತನಾಗದಿದ್ದರೂ ಪರವಾಯಿಲ್ಲ. ಗುಣವಂತನಾಗಿ ಬಾಳಿ ಬದುಕಬೇಕು. ಜೀವನದಲ್ಲಿ ಕಲಿಕೆ ಗಳಿಕೆ ಮತ್ತು ಭಗವಂತನ ಚಿಂತನೆ ಮುಖ್ಯ. ಶ್ರೀ ರಂಭಾಪುರಿ ಜಗದ್ಗುರುಗಳ ಸಾಮರಸ್ಯದ ಸಂದೇಶ ನಮ್ಮೆಲ್ಲರ ಬಾಳಿಗೆ ಆಶಾಕಿರಣವೆಂದರು.
ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ ಧರ್ಮ ಸಮಾರಂಭದಲ್ಲಿ ಹಾರನಹಳ್ಳಿ ಶಿವಯೋಗಿ ಶ್ರೀಗಳು ಪಾಲ್ಗೊಂಡು ಧರ್ಮ ಸಂಸ್ಕೃತಿ ಗುರು ಪರಂಪರೆಯ ಆದರ್ಶ ಚಿಂತನಗಳನ್ನು ಬೋಧಿಸಿದರು.ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಎಸ್.ಎಚ್. ಗ್ರಾನೈಟ್ಸ್ನ ರಾಜಶೇಖರ್, ಅ.ಭಾ.ವೀ.ಮಹಾಸಭೆ ಜಿಲ್ಲಾಧ್ಯಕ್ಷ ಗುರುಸ್ವಾಮಿ, ಬೇಲೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ಬಿ.ಎಸ್. ನವೀನಕುಮಾರ್ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಶಿಕ್ಷಕ ರಮೇಶ್ ಹೆಚ್.ಸಿ. ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿ ಹೇಮಲತಾ ನಿರೂಪಿಸಿದರು. ದರ್ಶನ್ ರಾಮೇಗೌಡರು ವಂದನಾರ್ಪಣೆ ಸಲ್ಲಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಅಶಾಂತಿ-ಅತೃಪ್ತಿಯಿಂದ ತತ್ತರಿಸುತ್ತಿರುವ ಜೀವ ಜಗತ್ತಿಗೆ ಧರ್ಮವೊಂದೇ ಆಶಾಕಿರಣ. ಒತ್ತಡದ ಬದುಕಿನಲ್ಲಿ ಸಿಲುಕಿರುವ ಮನುಷ್ಯನಿಗೆ ಧರ್ಮ ಪಾಲನೆಯಿಂದ ಸುಖ, ಶಾಂತಿ, ಸಮಾಧಾನ ಪಡೆಯಲು ಸಾಧ್ಯವಾಗುವುದು. ಶ್ರೀ ರಂಭಾಪುರಿ ಜಗದ್ಗುರುಗಳ ವಿಶ್ವ ಬಂಧುತ್ವದ ಚಿಂತನೆಗಳು ನೆಮ್ಮದಿಯ ಬದುಕಿಗೆ ಬೆಳಕು ತೋರುತ್ತವೆ ಎಂದರು.
Advertisement