ವಿಜಯಸಾಕ್ಷಿ ಸುದ್ದಿ, ಕಡೆನಂದಿಹಳ್ಳಿ : ಭಕ್ತರ ಸಹಾಯ-ಸಹಕಾರಗಳಿದ್ದರೆ ಎಂತಹ ಕಾರ್ಯಕ್ರಮಗಳನ್ನಾದರೂ ಆಯೋಜಿಸಬಹುದೆಂಬ ಆತ್ಮ ವಿಶ್ವಾಸ ತಮ್ಮಲ್ಲಿ ಮೂಡಿದೆ ಎಂದು ಕಡೆನಂದಿಹಳ್ಳಿ ತಪೋಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನುಡಿದರು.
ಶುಕ್ರವಾರ ಶ್ರೀ ಮಠದಲ್ಲಿ ಸೇವಾರ್ಥಿಗಳಿಗೆ, ಭಕ್ತರಿಗೆ ಮತ್ತು ಸಮಿತಿಯ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಫೆಬ್ರುವರಿ 2ರಿಂದ 13ರವರೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 33ನೇ ವರ್ಧಂತಿ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಬೃಹತ್ ಮೂರ್ತಿ ಲೋಕಾರ್ಪಣೆ ಅಂಗವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಪುರಾಣ ಪ್ರವಚನ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ಶ್ರೀ ಮಠದಿಂದ ಪ್ರಥಮ ಬಾರಿಗೆ ‘ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ನಡೆಯಿತು. ಈ ಎಲ್ಲ ಕಾರ್ಯಕ್ರಮಗಳನ್ನು ನೋಡಿದ ಶ್ರೀಮದ್ ರಂಭಾಪುರಿ ಜಗದ್ಗುರುಗಳು ತಮ್ಮ ಹರುಷ ವ್ಯಕ್ತಪಡಿಸಿದ್ದಾರೆ. ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದ್ದರೆ ಅದಕ್ಕೆ ಭಕ್ತರ ಸಹಕಾರವೇ ಕಾರಣವಾಗಿದೆ. ಭಕ್ತರೇ ಶ್ರೀ ಮಠದ ಆಸ್ತಿಯಾಗಿದ್ದು, ಧರ್ಮ ಕಾರ್ಯಗಳಿಗೆ ಭಕ್ತರ ಸಹಕಾರ ಅಗತ್ಯವಾಗಿದೆ ಎಂದರಲ್ಲದೆ, ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ರಚನಾತ್ಮಕ ಕಾರ್ಯಗಳಿಗೆ ಭಕ್ತರು ಹೀಗೆಯೇ ಸಹಕಾರ ನೀಡುವರೆಂಬ ಆತ್ಮ ವಿಶ್ವಾಸ ತಮ್ಮದಾಗಿದೆ ಎಂದರು.
ಅ.ಭಾ.ವೀ.ಮಹಾಸಭಾ ತಾಲೂಕ ಘಟಕದ ಅಧ್ಯಕ್ಷ ಎನ್.ವಿ. ಈರೇಶ್ ಹಾಗೂ ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಲ್ಲ ಸೇವಾರ್ಥಿಗಳಿಗೆ ಶ್ರೀ ಮಠದಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಲಾಯಿತು.
Advertisement