ಜೀವನ ಮೌಲ್ಯಗಳಿಂದ ಬದುಕು ಉಜ್ವಲ : ರಂಭಾಪುರಿ ಶ್ರೀಗಳು

0
Renuka Vijaya Purana Pravachana Mangala Ceremony
Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಭೌತಿಕ ಬದುಕಿಗೆ ಆಧ್ಯಾತ್ಮ ಜ್ಞಾನ ಅವಶ್ಯಕ. ಸತ್ಯ ಮತ್ತು ಪ್ರಾಮಾಣಿಕತೆಗಿಂತ ಉದಾತ್ತವಾದ ಧರ್ಮ ಇನ್ನೊಂದಿಲ್ಲ. ಜೀವನ ಮೌಲ್ಯಗಳು ಉಳಿದು-ಬೆಳೆದು ಬಂದರೆ ಬದುಕು ಉಜ್ವಲಗೊಳ್ಳುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಕೈಗೊಂಡ 33ನೇ ವರ್ಷದ ಶ್ರಾವಣ ತಪೋನುಷ್ಠಾನ ಹಾಗೂ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು. ಗುರು ಬೋಧದಿಂದ ಮನ ಅರಳಿ, ಭಾವ ಕುಸುಮ ವಿಕಾಸಗೊಳ್ಳುತ್ತದೆ. ತನಗಾಗಿ ಬಯಸುವುದು ಜೀವ ಗುಣವಾದರೆ ಎಲ್ಲರಿಗಾಗಿ ಬಯಸುವುದು ದೈವ ಗುಣವಾಗಿದೆ. ಕಾಯಿಸಿದ ಚಿನ್ನ ಒಡವೆಯಾಗುತ್ತದೆ. ಬಡಿದ ತಾಮ್ರ ತಂತಿಯಾಗುತ್ತದೆ. ಕೆತ್ತಿದ ಕಲ್ಲು ಸುಂದರ ಮೂರ್ತಿಯಾಗುತ್ತದೆ. ಜೀವನದಲ್ಲಿ ಕಷ್ಟಗಳು ಹೆಚ್ಚಾದಷ್ಟು ಜೀವನ ಮೌಲ್ಯ ವೃದ್ಧಿಸುತ್ತವೆ.
ತತ್ವವನ್ನರಿತವನಿಗೆ ಸತ್ಯದ ಬೆಳಕು ಗೋಚರಿಸುತ್ತದೆ. ವೀರಶೈವ ಧರ್ಮ ಶಾಸ್ತçದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಬದುಕಿ ಬಾಳುವ ಜನ ಸಮುದಾಯಕ್ಕೆ ಆಶಾಕಿರಣವಾಗಿವೆ. ಅವರ ವಿಶ್ವ ಬಂಧುತ್ವದ ವಿಚಾರ ಧಾರೆಗಳು ಸಮುದಾಯದ ಶ್ರೇಯಸ್ಸಿಗೆ ಸ್ಫೂರ್ತಿಯಾಗಿವೆ ಎಂದರು.
ಶ್ರೀ ರಂಭಾಪುರಿ ಲಿಂ.ಜಗದ್ಗುರು ವೀರರುದ್ರಮುನಿ ಶಿವಾಚಾರ್ಯ ಭಗವತ್ಪಾದರು 1924ರಲ್ಲಿ ಜನ್ಮ ತಾಳಿದರು. ಅವರು ಬದುಕಿ ಬಾಳಿದ್ದರೆ 2024ನೇ ಇಸ್ವಿಗೆ ಜನ್ಮ ಶತಮಾನೋತ್ಸವ ಆಚರಿಸಿಕೊಳ್ಳುವ ಯೋಗ ಬರುತ್ತಿತ್ತು.
1991ರಲ್ಲಿ 67ನೇ ವಯಸ್ಸಿನಲ್ಲಿ ಅವರು ಶಿವ ಸಾಯುಜ್ಯವನ್ನು ಹೊಂದಿದರು. ನೂರು ವರುಷದ ಸವಿ ನೆನಪಿಗಾಗಿ ಅವರ ಜನ್ಮ ಶತಮಾನೋತ್ಸವ ನಮ್ಮ ಸಂಸ್ಥೆಗಳ ಸಹಕಾರದಿಂದ ದಿನಾಂಕ 15-12-2024 ಭಾನುವಾರದಂದು ಒಂದು ದಿನದ ಕಾರ್ಯಕ್ರಮ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ನಡೆಸಲಾಗುವುದೆಂದು ಶ್ರೀ ರಂಭಾಪುರಿ ಜಗದ್ಗುರುಗಳು ಪುರಾಣ ಮಂಗಲ ಸಮಾರಂಭದಲ್ಲಿ ಪ್ರಕಟಪಡಿಸಿದರು.
ಶ್ರೀ ಪೀಠದಲ್ಲಿ ಒಂದು ತಿಂಗಳ ಕಾಲ ಪೂಜಾನುಷ್ಠಾನ ಕೈಗೊಂಡ ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳವರಿಗೆ `ತಪೋ ಭೂಷಣ’ ಪ್ರಶಸ್ತಿ, ಫಲ-ಪುಷ್ಪಗಳನ್ನಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪ್ರಭುದೇವ ಕಲ್ಮಠ ಅವರ ೭೧ನೇ ಜನ್ಮ ದಿನೋತ್ಸವ ನಿಮಿತ್ತ ಶ್ರೀ ರಂಭಾಪುರಿ ಜಗದ್ಗುರುಗಳು ನೂತನ ವಸ್ತçಗಳನ್ನು ಹೊದೆಸಿ ಸ್ಮರಣಿಕೆ ನೀಡಿ ದಂಪತಿಗಳಿಗೆ ಶುಭ ಹಾರೈಸಿದರು.
ನೇತೃತ್ವ ವಹಿಸಿದ ಹುಡುಗಿ ವಿರೂಪಾಕ್ಷಲಿಂಗ ಶಿವಾಚಾರ್ಯರು ಮಾತನಾಡಿ, ಸುಳ್ಳು ಹೇಳಲು ಹಲವು ದಾರಿ. ಆದರೆ ಸತ್ಯ ಹೇಳಲು ಇರುವುದೊಂದೇ ದಾರಿ. ವಿವೇಕ, ಧೈರ್ಯ, ಸ್ನೇಹ ಇವು ವ್ಯಾಧಿಗಳಿಗೆ ದಿವ್ಯೌಷಧ. ಶ್ರಾವಣ ಒಂದು ತಿಂಗಳ ಕಾಲ ಪವಿತ್ರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ತಾವು ನೆಲೆಸಿರುವುದು ಪೂರ್ವ ಜನ್ಮದ ಸುಕೃತವೆಂದರು.
ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಹಿರೇಮಠ, ಪ್ರಭುದೇವ ಕಲ್ಮಠ, ಚಂದ್ರಶೇಖರ, ವಿಶ್ವನಾಥ ದೇವರು, ಮಲೆಬೆನ್ನೂರಿನ ಜಗದೀಶ ಸಹೋದರರು, ದಾವಣಗೆರೆ ಡಾ. ರೇಣುಕಾರಾಧ್ಯ, ಗುಡದೂರು ವೀರೇಶ್ವರಸ್ವಾಮಿ, ಶಿವಕಾಂತಾರಾಧ್ಯ-ಗುರುಕಾAತಾರಾಧ್ಯ ಸಹೋದರರು, ತುಮಕೂರಿನ ಸದ್ಭಕ್ತರು ಸೇರಿ ಹಲವಾರು ಗಣ್ಯರು ಉಪಸ್ಥಿತರಿದ್ದರು. ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರ ಹಿರೇಮಠರಿಂದ ಭಕ್ತಿ ಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಕಾರ್ಯಕ್ರಮದ ನಂತರ ಅನ್ನ ದಾಸೋಹ ಜರುಗಿತು.
ಬೆಳಿಗ್ಗೆ ಕ್ಷೇತ್ರದ ಎಲ್ಲ ದೈವಗಳಿಗೆ ಶ್ರಾವಣ ಮಾಸ ಅಮಾವಾಸ್ಯೆ ಪವಿತ್ರ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿತು.
ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿದ ಉಟಗಿ ಹಿರೇಮಠದ ಶಿವಪ್ರಸಾದ ದೇವರು ಮಾತನಾಡಿ, ಬಲ್ಲವರ ಬೆಲ್ಲದಂತಹ ಮಾತಿಗೆ ಮೌಲ್ಯವನ್ನಿತ್ತು ಬಾಳನ್ನು ಕಟ್ಟಿಕೊಳ್ಳಲು ಗಟ್ಟಿ ನಿರ್ಧಾರ ಮಾಡಬೇಕಾಗಿದೆ. ಹೊಟ್ಟೆಗೆ ಕಟ್ಟಿದ ಬುತ್ತಿ ಹಳಸುತ್ತದೆ. ನೆತ್ತಿಗೆ ಕಟ್ಟಿದ ಬುತ್ತಿ ಹುಲುಸಾಗಿ ಬೆಳೆಯುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಜೀವನ ಸಂದೇಶ ಸಕಲರಿಗೂ ಒಳಿತನ್ನು ಉಂಟು ಮಾಡುತ್ತವೆ. ಒಂದು ತಿಂಗಳ ಕಾಲ ಶ್ರೀ ಪೀಠದಲ್ಲಿ ಪುರಾಣ ಪ್ರವಚನ ಕಾರ್ಯ ನನ್ನ ಪಾಲಿಗೆ ಬಂದ ಬಹು ದೊಡ್ಡ ಸೌಭಾಗ್ಯವಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ನಮ್ಮ ನಿಮ್ಮೆಲ್ಲರ ಮೇಲೆ ಸದಾ ಇರಲೆಂದರು.

Spread the love
Advertisement

LEAVE A REPLY

Please enter your comment!
Please enter your name here