ರೇಣುಕಾಚಾರ್ಯರ ಸಂದೇಶಗಳು ದಾರಿದೀಪ

0
rambhapuri
Spread the love

ವಿಜಯಸಾಕ್ಷಿ ಸುದ್ದಿ, ಅಜ್ಜಂಪುರ : ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಬಾಳಿನ ಭಾಗ್ಯೋದಯಕ್ಕೆ ಪೂರ್ವಜರ ಚಿಂತನಗಳು ಪೂರಕವಾಗಿವೆ. ಸಮರ ಜೀವನವನ್ನು ಅಮರ ಜೀವನದೆಡೆಗೆ ಕೊಂಡೊಯ್ಯಲು ಮತ್ತು ಪರಿಶುದ್ಧವಾದ ಬಾಳಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಂದೇಶಗಳು ದಾರಿದೀಪವಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ತಾಲೂಕಿನ ಗೌರಾಪುರ ಶ್ರೀ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭೌತಿಕ ಜೀವನದಲ್ಲಿ ಬೆಚಿದು, ಬಳಲಿ ಬಂದವರಿಗೆ ಆಧ್ಯಾತ್ಮ ಜ್ಞಾನದ ಸಂಪತ್ತು ಆತ್ಮಬಲ ಉಂಟು ಮಾಡುತ್ತದೆ. ಜಾತಿ ಜನಾಂಗಗಳ ಗಡಿ ಮೀರಿ ಮಾನವೀಯ ಉದಾತ್ತ ಮೌಲ್ಯಗಳನ್ನು ಸದಾ ಬೆಳೆಸುವಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಕೊಡುಗೆ ಅಮೂಲ್ಯವಾಗಿದೆ. ಸಾಮರಸ್ಯ, ಸೌಹಾರ್ದತೆಯ ಬದುಕಿನ ಬೆಸುಗೆಗೆ ರೇಣುಕಾಚಾರ್ಯರು ಬೋಧಿಸಿದ ಚಿಂತನೆಗಳ ಪರಿಪಾಲನೆಯ ಅವಶ್ಯಕತೆ ಬಹಳಷ್ಟಿದೆ. ಸಾತ್ವಿಕ-ತಾತ್ವಿಕ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಳ್ಳಲು ಅವರು ಬೋಧಿಸಿದ ಶಿವಾದ್ವೈತ ಜ್ಞಾನ ಸಂಪತ್ತು ಉಜ್ವಲ ಬಾಳಿನ ಶ್ರೇಯಸ್ಸಿಗೆ ಕಾರಣವಾಗಿವೆ.
ಸಂಸ್ಕಾರ ಸಂಸ್ಕೃತಿಗಳ ಮೂಲಕ ಜನಮನವನ್ನು ತಿದ್ದಿ, ತೀಡಿ ಸನ್ಮಾರ್ಗಕ್ಕೆ ಕರೆತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಗೌರಾಪುರ ಗ್ರಾಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಅದ್ದೂರಿಯಾಗಿ ಜರುಗುತ್ತಿರುವುದು ತಮ್ಮೆಲ್ಲರಲ್ಲಿರುವ ಧರ್ಮನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸಕಲರಿಗೂ ಅಭ್ಯುದಯ ಬಯಸಿದ ಮತ್ತು ಮೌಲ್ಯಾಧಾರಿತ ಬದುಕಿನ ಸೂತ್ರಗಳನ್ನು ಬೋಧಿಸಿದ ಯುಗಪುರುಷರು ರೇಣುಕಾಚಾರ್ಯರು. ಸಂಸ್ಕೃತಿಯ ಪುನಶ್ಚೇತನದೊಂದಿಗೆ ಸಾಮಾಜಿಕ ಸತ್ಕಾಂತಿಗೆ ನೆಲೆಯಾದವರು ರೇಣುಕಾಚಾರ್ಯರು. ಅವರ ಆದರ್ಶ ಚಿಂತನಗಳನ್ನು ಮೈಗೂಡಿಸಿಕೊಂಡು ಬಾಳಬೇಕೆಂದರು.
ಸಮಾರಂಭದಲ್ಲಿ ಹುಣಸಘಟ್ಟ ಗುರುಮೂರ್ತಿ ಶಿವಾಚಾರ್ಯರು, ತೆಂಡೇಕೆರೆ ಗಂಗಾಧರ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ತಾವರೆಕೆರೆ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಬಿ.ಪಿ. ಶಿವಮೂರ್ತಿ, ಜಿ.ಹೆಚ್. ಜಯಮೂರ್ತಿ, ಎಸ್.ಎಸ್. ಶ್ರೀಕಂಠಪ್ಪ, ಚಿ.ಸ. ಪ್ರಭುಲಿಂಗ ಶಾಸ್ತಿç ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಪಡೆದರು.
ಜಿ.ಎಸ್. ಶೇಖರಯ್ಯ, ಜಿ.ಆರ್. ಓಂಕಾರಯ್ಯ, ಡಾ. ಜಿ.ಆರ್. ಶಿವಪ್ರಸಾದ್, ಡಿ.ರಾಜಣ್ಣ, ಜಿ.ಸಿ. ಲಿಂಗಮೂರ್ತಿ, ಜಿ.ಉಮಾಪತಿ ಮೊದಲಾದ ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ನಿವೃತ್ತ ಶಿಕ್ಷಕ ಸೋಮಶೇಖರ ಸ್ವಾಗತಿಸಿದರು. ಶಾಂತಾ ಆನಂದ ಭಕ್ತಿಗೀತೆ ಹಾಡಿದರು. ಶಿಕ್ಷಕಿ ಸೌಮ್ಯ ಮೋಹನ್‌ಕುಮಾರ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಸಹಸ್ರಾರು ಜನರು ಪಾಲ್ಗೊಂಡು ಜಗದ್ಗುರುಗಳ ಆಶೀರ್ವಾದ ಪಡೆದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕ ಜಂಗಮ ಸಮಾಜದ ಅಧ್ಯಕ್ಷ ಎಸ್.ವಿ. ಗಂಗಾಧರಯ್ಯ, ಸರ್ವ ಜನಾಂಗದ ಉನ್ನತಿಗೆ ಧರ್ಮವೇ ಮೂಲವಾಗಿದೆ. ಪೂರ್ವದ ಋಷಿಮುನಿಗಳು ಮತ್ತು ಆಚಾರ್ಯರು ಅಮೂಲ್ಯವಾದ ಕೊಡುಗೆ ಕೊಟ್ಟಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವ ಬಂಧುತ್ವದ ಚಿಂತನಗಳನ್ನು ಬೋಧಿಸುವುದರ ಮೂಲಕ ಭಕ್ತ ಸಮುದಾಯದ ಭಾವನೆಗಳನ್ನು ಪರಿಶುದ್ಧಗೊಳಿಸಿದ್ದಾರೆ. ಅಂಥ ಮಹಿಮಾನ್ವಿತರ ಸಿದ್ಧಿ ಸಾಧನೆಗಳು ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ಪ್ರಸಾರಪಡಿಸುವ ಸದುದ್ದೇಶದ ಹಿನ್ನೆಲೆಯಲ್ಲಿ ಈ ವರುಷ ಗೌರಾಪುರದಲ್ಲಿ ಜರುಗುತ್ತಿರುವುದು ನಮ್ಮೆಲ್ಲರಿಗೂ ಸಂತೋಷವನ್ನು ತಂದಿದೆ ಎಂದರು.

Spread the love
Advertisement

LEAVE A REPLY

Please enter your comment!
Please enter your name here