ವಿಜಯಸಾಕ್ಷಿ ಸುದ್ದಿ, ಗದಗ : ಬಸವರಾಜ ಬೊಮ್ಮಾಯಿ ಅವರನ್ನು ಸಂಸತ್ತಿಗೆ ಕಳಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ನದಿ ಜೋಡಣೆ ಕನಸು ನನಸು ಮಾಡಿ, ದೇಶವನ್ನು ಶಾಶ್ವತವಾಗಿ ಬರಮುಕ್ತ ರಾಷ್ಟçವನ್ನಾಗಿ ಮಾಡುವ ಸಂಕಲ್ಪ ಮಾಡಬೇಕು ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದರು.
ಭಾನುವಾರ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಯುವ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಸವರಾಜ ಬೊಮ್ಮಾಯಿ ಅವರಂಥ ನಿಸ್ವಾರ್ಥ ಆಡಳಿತಗಾರರನ್ನು ರಾಜ್ಯ ಕಂಡಿಲ್ಲ. ನೀರಾವರಿ ಯೋಜನೆಯ ಭಗೀರಥರಾಗಿ ಅವರು ಹೆಸರಾಗಿದ್ದಾರೆ. ಅಂಥವರನ್ನು ಸಂಸತ್ತಿಗೆ ಕಳಿಸಿ ನರೇಂದ್ರ ಮೋದಿಯವರ ಬಲ ಹೆಚ್ಚಿಸಬೇಕು ಎಂದರು.
ಹಾವೇರಿ-ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸಂಸತ್ತು ಪ್ರಜಾಪ್ರಭುತ್ವದ ದೇಗುಲ, ಸಂವಿಧಾನ ನನಗೆ ಧರ್ಮ ಗ್ರಂಥ ಎಂದು ಮೋದಿ ಹೇಳಿದ್ದಾರೆ. ಆದರೆ, ವಿರೋಧ ಪಕ್ಷಗಳು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎನ್ನುವ ಕೂಗು ಆರಂಭಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಯಾರಿಂದಲೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ತುಷ್ಠೀಕರಣ ರಾಜಕಾರಣದ ಮೂಲಕ ದೇಶವನ್ನು ಹಿಂದುಳಿಯುವಂತೆ ಮಾಡಿತು. ಆದರೆ ಮೋದಿ ಬಂದ ನಂತರ ರಾಜಕಾರಣದ ದಿಕ್ಕೇ ಬದಲಾಯಿತು. ಯುವಕರಲ್ಲಿ ವಿಶ್ವಾಸ ಮೂಡಿತು.
ಆತ್ಮನಿರ್ಭರ ಭಾರತದ ಮೂಲಕ ಡಾ.ಅಂಬೇಡ್ಕರ್ ಅವರ ಕನಸು ನನಸಾಗುತ್ತಿದೆ. ಸಂವಿಧಾನಬದ್ಧ ಆಡಳಿತ ಸಾಧ್ಯವಾಗುತ್ತಿದೆ. ಇಂದಿರಾ ಗಾಂಧಿ 1975 ಜೂನ್ 6ರಂದು ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗಲೇ ಕಾಂಗ್ರೆಸ್ಸಿಗರು ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕುನ್ನು ಕಳೆದುಕೊಂಡಿದ್ದಾರೆ.
ತುರ್ತು ಪರಿಸ್ಥಿತಿಯಂತಹ ಪ್ರಮಾದ ಮಾಡಿ, ಲೋಕಸಭೆ ಅವಧಿಯನ್ನು ವಿಸ್ತರಣೆ ಮಾಡಿ, ಸರ್ವಾಧಿಕಾರಿ ಆಡಳಿತ ನಡೆಸಿದವರು ಇವತ್ತು ಸಂವಿಧಾನ ರಕ್ಷಣೆ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಟೀಕಿಸಿದರು.
ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವ ಮೂಲಕ ದೇಶವನ್ನು ಮುನ್ನಡೆಸುತ್ತಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿ ಹೆಸರಿನಲ್ಲಿ ಸರಕಾರದ ಖಜಾನೆ ಖಾಲಿ ಮಾಡಿದೆ. ಹಿಂದಿನ ಸರಕಾರದ ಎಲ್ಲ ಜನಪರ ಕಾರ್ಯಕ್ರಮಗಳನ್ನು ರದ್ದು ಮಾಡಿ ಅಭಿವೃದ್ಧಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ವಿ.ಪರಿ ಸದಸ್ಯ ಎಸ್.ವಿ. ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಮುಖಂಡರಾದ ಮೋಹನ ಮಾಳಶೆಟ್ಟಿ, ರವಿ ದಂಡಿನ, ನಾಗರಾಜ ಕುಲಕರ್ಣಿ, ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ ಇತರರು ಉಪಸ್ಥಿತರಿದ್ದರು.
ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿ
ಯುವ ಸಮಾವೇಶಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರು ಗದಗ-ಬೆಟಗೇರಿ ಅವಳಿ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಸಿದರು. ಅಂಬಾಭವಾನಿ ದೇವಸ್ಥಾನದಿಂದ ಆರಂಭವಾದ ಬೈಕ್ ರ‍್ಯಾಲಿ ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ತೆರೆದ ವಾಹನದಲ್ಲಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕುಮಾರ ಬಂಗಾರಪ್ಪ, ಶಾಸಕ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ ರೋಡ್ ಶೋದಲ್ಲಿ ಪಾಲ್ಗೊಂಡರು.