ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ಅಚ್ಚರಿಯ ದಾಖಲೆ ನಿರ್ಮಿಸಿದೆ. ಬೆಳಗಾವಿಯ ವಿಟಿಯು, ಬಿಇ ಮತ್ತು ಬಿಟೆಕ್ ಅಂತಿಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳಲ್ಲಿ ಪ್ರಕಟಿಸಿ ಹೊಸ ಮೈಲಿಗಲ್ಲು ಸಾಧಿಸಿದೆ.
ಇಂದು ನಡೆದ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 56,192 ವಿದ್ಯಾರ್ಥಿಗಳು ಹಾಜರಾಗಿದ್ದರು. ಸಂಜೆ 5:30ಕ್ಕೆ ಪರೀಕ್ಷೆ ಅಂತ್ಯಗೊಂಡ ತಕ್ಷಣವೇ ಡಿಜಿಟಲ್ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಿದ ವಿವಿ, 5:40ಕ್ಕೆ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದೆ.
ಈ ಬಾರಿ ವಿಶ್ವವಿದ್ಯಾಲಯ ಶೇ.99.98ರಷ್ಟು ಫಲಿತಾಂಶ ದಾಖಲಿಸಿದ್ದು, ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ವೇಗದ ಮೌಲ್ಯಮಾಪನ ವ್ಯವಸ್ಥೆಗೆ ಹೊಸ ಮಾದರಿಯಾಗಿದೆ. ಫಲಿತಾಂಶವನ್ನು ವಿದ್ಯಾರ್ಥಿಗಳ ವಾಟ್ಸಪ್ ಸಂಖ್ಯೆಗಳಿಗೂ ನೇರವಾಗಿ ಕಳುಹಿಸಿರುವುದು ಮತ್ತೊಂದು ವಿಶೇಷ.
ಡಿಜಿಟಲ್ ಟೆಕ್ನಾಲಜಿ ಮತ್ತು ಸ್ವಯಂಚಾಲಿತ ಮೌಲ್ಯಮಾಪನ ವ್ಯವಸ್ಥೆ ಬಳಸಿ ಈ ಸಾಧನೆ ಸಾಧ್ಯವಾಗಿದೆ ಎಂದು ವಿವಿ ಮೂಲಗಳು ತಿಳಿಸಿವೆ. ಪರೀಕ್ಷಾ ವಿಭಾಗದ ಸಿಬ್ಬಂದಿ ಹಾಗೂ ತಾಂತ್ರಿಕ ತಂಡದ ಕಾರ್ಯಕ್ಕೆ ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ ಅಭಿನಂದನೆ ಸಲ್ಲಿಸಿದ್ದಾರೆ.



