ಸಾರ್ವಜನಿಕರ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳ ದಾಳಿ……
ವಿಜಯಸಾಕ್ಷಿ ಸುದ್ದಿ, ಮುಂಡರಗಿ
ಸಾರ್ವಜನಿಕರಿಗೆ ವಿತರಿಸುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅನಧಿಕೃತವಾಗಿ ನಕಲಿ ರಸೀದಿಯೊಂದಿಗೆ ಸಾಗಿಸುತ್ತಿದ್ದ ವೇಳೆ ಸಾಗಾಟಕ್ಕೆ ಬಳಸಿದ ಲಾರಿ, 4,59,310 ರೂ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ಜೂನ್ 5ರಂದು ಮಧ್ಯಾಹ್ನ 1.20ರ ಸುಮಾರಿಗೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕು ಕೊಂಬಳಿಯ ವಾಹನ ಚಾಲಕ ಹೊನ್ನಪ್ಪ ಮಲ್ಲಪ್ಪ ಮಾನ್ಯರಮಸಲವಾಡ ಹಾಗೂ ಲಾರಿಯ ಮಾಲಕ ಇಬ್ಬರೂ ಕೂಡಿಕೊಂಡು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕ್ವಾಲಿಟಿ ಅನಾಲೈಸಿಸ್ ನಕಲಿ ರಸೀದಿಗಳನ್ನು ಮಾಡಿ, ಅನಧಿಕೃತವಾಗಿ ತಮ್ಮ ಸ್ವಂತ ಲಾಭಕ್ಕೋಸ್ಕರ ಲಾರಿಯಲ್ಲಿ ತುಂಬಿಸಿಕೊಂಡು ಬಂದಿದ್ದರು.

ಮುಂಡರಗಿ ಪಟ್ಟಣದ ಕೆಎಫ್‌ಸಿಎಸ್ ಗೋದಾಮಿನ ಬಳಿ ಇಬ್ಬರೂ ಆರೋಪಿಗಳು ಸದರಿ ಲಾರಿಯೊಂದಿಗೆ ನಿಂತಿದ್ದರು. ಈ ಸಮಯದಲ್ಲಿ ಮುಂಡರಗಿ ವಲಯದ ಆಹಾರ ನಿರೀಕ್ಷಕ ಜಗದೀಶ ಭರಮಪ್ಪ ಅಮಾತಿ ಅವರಿಗೆ ಬಂದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಲಾರಿಯಲ್ಲಿದ್ದ 19,970 ಕೆಜಿ ಅಕ್ಕಿಯನ್ನು ಪರಿಶೀಲಿಸಿ ವಶಕ್ಕೆ ಪಡೆದರು.
ಇದನ್ನೂ ಓದಿ ಲಕ್ಷಾಂತರ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ವಶ; ದಂಧೆಕೋರ ವೀರೇಶ್ ಬಡಿಗೇರನಿಗೆ ಬಿಸಿ!
ವಶಪಡಿಸಿಕೊಂಡ ಅಕ್ಕಿಯ ಒಟ್ಟೂ ಮೌಲ್ಯ 4,59,310 ರೂ ಆಗಿದ್ದು, ಸದರಿ ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ದೂರಿಗೆ ಸಂಬಂಧಿಸಿ ಅಪರಾಧ: 84/2023, ಕಲಂ-3/7, ಇ.ಸಿ ಕಾಯ್ದೆ ಮತ್ತು ಪಿಡಿಎಸ್ ಆರ್ಡರ್-2016ರ ಕಲಂ 18ರ ಅಡಿಯಲ್ಲಿ ಮುಂಡರಗಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.