ನಿಷೇಧವಿದ್ದರೂ ಮಾಂಜಾ ದಾರ ಗದಗನಲ್ಲಿ ಭರ್ಜರಿ ಮಾರಾಟ….
ವಿಜಯಸಾಕ್ಷಿ ಸುದ್ದಿ, ಗದಗ
ಕಾರ ಹುಣ್ಣಿಮೆ ದಿನದಂದು ಮಾಂಜಾ ದಾರಕ್ಕೆ ಸಿಲುಕಿ ತೀವ್ರ ಗಾಯಗೊಂಡು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾನೆ.
ಕಳೆದ ಆರು ದಿನಗಳಿಂದ ಜಿಮ್ಸ್ ಆಸ್ಪತ್ರೆಯಲ್ಲಿ ನರಳಾಡಿದ ಯುವಕ ಪಿ.ರವಿ (28) ಇಂದು ಮುಂಜಾನೆ ಮೃತಪಟ್ಟಿದ್ದಾನೆ.
ಇದನ್ನೂ ಓದಿ ಜೀವ ಹಿಂಡುತ್ತಿರುವ ಗಾಳಿಪಟ ದಾರ; ನಿನ್ನೆ ಒಂದೇ ದಿನ ಪೊಲೀಸ್ ಸೇರಿ ಮೂವರಿಗೆ ಗಾಯ-ಯುವಕನ ಸ್ಥಿತಿ ಗಂಭೀರ
ಕಾರ ಹುಣ್ಣಿಮೆ ದಿನದಂದು ಗದಗ ನಗರದ ಡಂಬಳ ನಾಕಾ ಬಳಿ ಬೈಕ್ ನಲ್ಲಿ ಹೊರಟಿದ್ದ ಯುವಕ ಪಿ.ರವಿಯ ಕತ್ತಿಗೆ ಮಾಂಜಾ ದಾರ ಸಿಲುಕಿ ಕತ್ತು ಕಟ್ ಆಗಿತ್ತು. ತೀವ್ರ ರಕ್ತಸ್ರಾವದಿಂದ ಗಂಭೀರ ಪರಿಸ್ಥಿತಿಯಲ್ಲಿದ್ದ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರಕೆರೆಯ ನಿವಾಸಿಯಾಗಿದ್ದ ಪಿ. ರವಿ ನಗರದ ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ.
ಜಿಮ್ಸ್ ನ ಶವಾಗಾರದ ಮುಂದೆ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂಧನ ಮುಗಿಲ ಮುಟ್ಟಿತ್ತು.
ಅಂದು ಕಾರ ಹುಣ್ಣಿಮೆ ದಿನದಂದು ಗದಗ-ಬೆಟಗೇರಿ ಅವಳಿ ನಗರದಲ್ಲಿ ಹಲವು ಜನರು ಮಾಂಜಾ ದಾರದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಡೇಂಜರ್ ಮಾಂಜಾ ದಾರ ಮಾರಾಟ ಮಾಡದಂತೆ ನಿಷೇಧವಿದ್ದರೂ ಅವಳಿ ನಗರದಲ್ಲಿ ಭರ್ಜರಿ ಮಾರಾಟವಾಗುತ್ತಿದೆ.
ಗದಗ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.