‘ಟಾಕ್ಸಿಕ್’ ಟೀಸರ್ ರಿಲೀಸ್ ಆದ ನಂತರ ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್, ಸೋಮವಾರ ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡು ಮತ್ತೆ ಗಮನ ಸೆಳೆದಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ ಕಾರ್ ಕಡೆ ಸಾಗುವ ವೇಳೆ ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾದ ಯಶ್, ಕೆಲ ಕ್ಷಣ ನಿಂತು ಫೋಟೊಗಳಿಗೆ ಪೋಸ್ ನೀಡಿ ಬಳಿಕ ಕೈಮುಗಿದು ಗೌರವ ತೋರಿಸಿ ಕಾರ್ ಹತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯಶ್ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದೇ ಲೋ-ಪ್ರೊಫೈಲ್ನಲ್ಲಿ ಇದ್ದರು. ಬಹಳ ದಿನಗಳ ನಂತರ ಮುಂಬೈನಲ್ಲಿ ಅವರು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ‘ಟಾಕ್ಸಿಕ್’ ಟೀಸರ್ಗೆ ಪರ ಮತ್ತು ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದರೂ, ಚಿತ್ರದ ಮೇಲಿನ ನಿರೀಕ್ಷೆ ಮಾತ್ರ ದಿನದಿಂದ ದಿನಕ್ಕೆ ಮತ್ತಷ್ಟು ಬಲವಾಗುತ್ತಿದೆ.
ಸದ್ಯ ಯಶ್ ‘ಟಾಕ್ಸಿಕ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ನಡೆಯುತ್ತಿರುವ ಪೋಸ್ಟ್ ಪ್ರೊಡಕ್ಷನ್ ಔಟ್ಪುಟ್ನ್ನು ಅವರು ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಕಳೆದ ಕೆಲವು ತಿಂಗಳಿಂದ ಮುಂಬೈನಲ್ಲೇ ಅವರು ವಾಸ್ತವ್ಯ ಮಾಡಿಕೊಂಡಿದ್ದಾರೆ. ಸದಾ ಕ್ಯಾಮೆರಾದಿಂದ ದೂರ ಉಳಿಯುವ ಯಶ್ ಈಗ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ವಿಶೇಷ ಕ್ಷಣವಾಗಿದೆ.



