ಮೈಸೂರು:- ಮೈಸೂರಿನಲ್ಲಿ ಖದೀಮರ ಕಾಟ ದಿನೇದಿನೇ ಹೆಚ್ಚಾಗುತ್ತಿದ್ದು, ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿ ಗ್ರಾಮದ ಕೆ.ಆರ್. ನಗರ ಮುಖ್ಯ ರಸ್ತೆಯಲ್ಲಿರುವ ಪ್ರಾವಿಷನ್ ಸ್ಟೋರ್ನಲ್ಲಿ ತಡರಾತ್ರಿ ಕಳ್ಳತನಕ್ಕೆ ಯತ್ನ ನಡೆದಿದೆ.
ಮೊಬೈಲ್ ಬ್ಯಾಟರಿ ಬೆಳಕು ಬಳಸಿ ಅಂಗಡಿಗೆ ನುಗ್ಗಲು ಯತ್ನಿಸಿದ ಕಳ್ಳನನ್ನು ಅಂಗಡಿ ಮಾಲೀಕ ಗಮನಿಸಿದ ತಕ್ಷಣವೇ ಆತ ಎಚ್ಚರಗೊಂಡು, ಮಾಲೀಕನನ್ನು ಕಂಡು ಬರಿಗೈಲಿ ಪರಾರಿಯಾಗಿದ್ದಾನೆ. ಕಳ್ಳತನಕ್ಕೆ ಯತ್ನಿಸಿದ ಸಂಪೂರ್ಣ ದೃಶ್ಯ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಈ ಘಟನೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಮೈಸೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಹುಣಸೂರಿನ ಚಿನ್ನದ ಅಂಗಡಿಯಲ್ಲಿ ಹಾಡುಹಗಲೇ ದರೋಡೆ ನಡೆದು ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು. ಇದಲ್ಲದೆ ಮೈಸೂರು ನಗರದಲ್ಲಿ ಬೈಕ್ ಕಳ್ಳತನ, ಪಿರಿಯಾಪಟ್ಟಣದ ಬೈಲುಕುಪ್ಪೆಯಲ್ಲಿ ಅಡಿಕೆ ತೋಟ ಹಾಗೂ ಮೊಬೈಲ್ ಅಂಗಡಿಗೆ ಕನ್ನ, ನಂಜನಗೂಡಿನಲ್ಲಿ ಹಸುಗಳ ಕಳ್ಳತನ ಪ್ರಕರಣಗಳು ವರದಿಯಾಗಿವೆ.
ನಿರಂತರ ಕಳ್ಳತನ–ದರೋಡೆಗಳಿಂದ ಜಿಲ್ಲೆಯ ಜನತೆ ಭಯಭೀತರಾಗಿದ್ದು, ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.



