ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ರಾಜ್ಯಸಭೆಗೆ ಮರು ಆಯ್ಕೆ ಮಾಡುವ ವಿಚಾರ ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟದ್ದು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ದೇವೇಗೌಡರ ಜನ್ಮದಿನದ ಅಂಗವಾಗಿ ಕುಟುಂಬ ಸಮೇತವಾಗಿ ಶುಭಾಶಯ ಕೋರಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರ ರಾಜ್ಯಸಭೆ ಅವಧಿ ಈಗಾಗಲೇ ಮುಕ್ತಾಯಗೊಂಡಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯ ವೇಳೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗ ಯಾವುದೇ ಷರತ್ತುಗಳನ್ನು ನಾವು ವಿಧಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರಿಗೆ ವಿಶೇಷ ಗೌರವ ನೀಡುತ್ತಾರೆ. ಹೀಗಾಗಿ ರಾಜ್ಯಸಭೆ ಮರು ಆಯ್ಕೆ ಕುರಿತ ಅಂತಿಮ ತೀರ್ಮಾನ ಬಿಜೆಪಿ ಹೈಕಮಾಂಡ್ ಕೈಯಲ್ಲಿದೆ ಎಂದು ಅವರು ತಿಳಿಸಿದರು.
ಈ ವಿಷಯದಲ್ಲಿ ನಮ್ಮಿಂದ ಯಾವುದೇ ಒತ್ತಾಯ ಇಲ್ಲ. ಬಿಜೆಪಿ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿ” ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಇನ್ನೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಸಮಾವೇಶದ ಕುರಿತು ಪ್ರತಿಕ್ರಿಯಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್‌ನ ಪ್ರಮುಖ ಕ್ಷೇತ್ರವಾಗಿದ್ದು, ಇದೇ ಕಾರಣಕ್ಕೆ ಸಮಾವೇಶ ಆಯೋಜಿಸಲಾಗಿತ್ತು ಎಂದರು.
ಸಮಾವೇಶದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭಾಗವಹಿಸಿದ್ದರು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಜನರು ಭಾಗವಹಿಸಿದ್ದರು. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಜಿಟಿ ದೇವೇಗೌಡರ ವಿಚಾರವಾಗಿ ಮಾತನಾಡಲು ನಿರಾಕರಿಸಿದ ನಿಖಿಲ್, ಆ ಕುರಿತು ಪಕ್ಷದ ವರಿಷ್ಠರಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಹೆಚ್.ಡಿ. ದೇವೇಗೌಡರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.



