ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವಿ.ಡಿ. ಸತೀಶನ್ ನೇತೃತ್ವದ ಸರ್ಕಾರ, ಅಧಿಕಾರ ಸ್ವೀಕರಿಸಿದ ತಕ್ಷಣವೇ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪಂಚ ಗ್ಯಾರಂಟಿಗಳ ಪೈಕಿ ಎರಡು ಮಹತ್ವದ ಭರವಸೆಗಳನ್ನು ಜಾರಿಗೆ ತರುವ ನಿರ್ಧಾರ ಕೈಗೊಂಡಿದೆ.
ರಾಜ್ಯದ ಎಲ್ಲಾ ಮಹಿಳೆಯರಿಗೆ ಜೂನ್ 15ರಿಂದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಘೋಷಿಸಿದ್ದಾರೆ. ಈ ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಇದರ ಜೊತೆಗೆ ವೃದ್ಧರ ಕಲ್ಯಾಣಕ್ಕಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ವೃದ್ಧರಿಗಾಗಿ ಪ್ರತ್ಯೇಕ ಇಲಾಖೆಯನ್ನು ರಚಿಸುತ್ತಿರುವುದು ದೇಶದಲ್ಲೇ ಇದೇ ಮೊದಲು ಎಂಬುದಾಗಿ ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಮಹಿಳಾ ಹಾಗೂ ಕಾರ್ಮಿಕ ವರ್ಗದ ಕಲ್ಯಾಣಕ್ಕೆ ಒತ್ತು ನೀಡಿರುವ ಸರ್ಕಾರ, ಆಶಾ ಕಾರ್ಯಕರ್ತೆಯರ ಗೌರವಧನವನ್ನು ಮೊದಲ ಹಂತದಲ್ಲಿ 3,000 ರೂಪಾಯಿ ಹೆಚ್ಚಳ ಮಾಡಿದೆ. ಇದರಿಂದ ಅವರ ಒಟ್ಟು ಮಾಸಿಕ ವೇತನ 9,000 ರೂಪಾಯಿಯಿಂದ 12,000 ರೂಪಾಯಿಗೆ ಏರಿಕೆಯಾಗಲಿದೆ.
ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಸಿಬ್ಬಂದಿ, ಪೂರ್ವ ಪ್ರಾಥಮಿಕ ಶಿಕ್ಷಕರು ಹಾಗೂ ಆಯಾಗಳ ವೇತನವನ್ನು ತಲಾ 1,000 ರೂಪಾಯಿ ಹೆಚ್ಚಿಸುವುದಾಗಿ ಘೋಷಿಸಲಾಗಿದೆ.
ಚುನಾವಣಾ ಭರವಸೆಗಳನ್ನು ಹಂತ ಹಂತವಾಗಿ ಜಾರಿಗೊಳಿಸುವ ದಿಸೆಯಲ್ಲಿ ಸರ್ಕಾರ ಮೊದಲ ಹೆಜ್ಜೆ ಇಟ್ಟಿದ್ದು, ಜನಪರ ಆಡಳಿತಕ್ಕೆ ಆದ್ಯತೆ ನೀಡುವುದಾಗಿ ಮುಖ್ಯಮಂತ್ರಿ ಸತೀಶನ್ ತಿಳಿಸಿದ್ದಾರೆ.



