ಎಸ್‌ಪಿ ಬಿ.ಎಸ್. ನೇಮಗೌಡ ಶ್ಲಾಘನೆ
ರೋಣ: ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧೆಡೆ ದ್ವಿಚಕ್ರ ವಾಹನ ಕಳ್ಳತನ ನಡೆಯುತ್ತಿರುವ ಬಗ್ಗೆ ಆಗಾಗ ವಿಷಯಗಳು ಕೇಳಿ ಬರುತ್ತಿದ್ದವು. ಇದನ್ನು ಭೇದಿಸಿರುವ ರೋಣ ಪೊಲೀಸರು ಅರೋಪಿ ಸಮೇತ ಹತ್ತು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ರೋಣ ಪಟ್ಟಣ ಸೇರಿದಂತೆ ಅನೇಕ ಕಡೆಗಳಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ನಡೆಯುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿದ್ದವು. ಈ ಕುರಿತು ಸಿಪಿಐ ಎಸ್.ಎಸ್. ಬಿಳಗಿ, ಪಿಎಸ್‌ಐ ಎಲ್.ಕೆ. ಜೂಲಕಟ್ಟಿಯವರ ನೇತೃತ್ವದಲ್ಲಿ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಲಾಗಿತ್ತು.

ತನಿಖೆ ನಡೆಸಿದ ರೋಣ ಪೊಲೀಸರು ಆರೋಪಿ ಸಮೇತ 10 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದು ಶ್ಲಾಘನೀಯವಾಗಿದೆ.
ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಪ್ರಶಂಸಾ ಪತ್ರದೊಂದಿಗೆ ಸೂಕ್ತ ಬಹುಮಾನವನ್ನು ವಿತರಿಸಲಾಗುವುದು ಎಂದರು.
ಡಿವಾಯ್‌ಎಸ್‌ಪಿ ಪ್ರಭುಗೌಡ ಡಿ.ಕೆ. ಮಾತನಾಡಿ, ಹಲವಾರು ದಿನಗಳಿಂದ ನಡೆಯುತ್ತಿರುವ ಕಳ್ಳತನಕ್ಕೆ ರೋಣ ಪೊಲೀಸರ ಕಾರ್ಯಾಚರಣೆ ಚುರುಕು ಮುಟ್ಟಿಸಿದ್ದು, ರೋಣ ತಾಲೂಕಿನ ಸೂಡಿ ನಿವಾಸಿಯಾದ ಸಿರಾಜ್ ಬಾವಾಸಾಬ ದಳವಾಯಿಯನ್ನು ಬಂಧಿಸಲಾಗಿದೆ ಎಂದರು.
ಸಿಪಿಐ ಎಸ್.ಎಸ್. ಬಿಳಗಿ, ಪಿಎಸ್‌ಐ ಎಲ್.ಕೆ. ಜೂಲಕಟ್ಟಿ, ಎಸ್.ಬಿ. ಪವಾಡಿ, ಎಚ್.ಎಸ್. ಶಂಕ್ರಿ, ಕುಮಾರ ತಿಗರಿ, ವ್ಹಿ.ಎಸ್. ರಾಯರ, ಮಂಜುನಾಥ ಬಂಡಿವಡ್ಡರ, ಮಂಜುನಾಥ ಕುರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಒಂದೇ ಸಂಖ್ಯೆಯ ನಂಬರ್ ಪ್ಲೇಟ್ ನಾಲ್ಕು ಬೈಕ್‌ಗಳಿಗೆ ಅಳವಡಿಸಿ ಮಾರಾಟ ಮಾಡಿದ್ದು, ಈ ಪ್ರಕರಣದಿಂದ ಬಯಲಿಗೆ ಬಂದಿರುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಸರಿಯಾದ ದಾಖಲಾತಿಗಳಿಲ್ಲದೆ ಬೈಕ್ ಖರೀದಿ ಮಾಡಿದ ಗ್ರಾಹಕರ ವಿರುದ್ಧವೂ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅಪರಾಧ ಪ್ರಕರಣಗಳನ್ನು ತಪ್ಪಿಸುವ ನಿಟ್ಟಿನಲ್ಲಿ ರೋಣ ಪಟ್ಟಣದ ಮುಖ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಚಿಂತನೆ ಕೈಗೊಂಡಿದ್ದು, ಶೀಘ್ರವೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.
-ಬಿ.ಎಸ್.ನೇಮಗೌಡ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ಗದಗ