ವಿಜಯಸಾಕ್ಷಿ ಸುದ್ದಿ, ಗದ: ರೋಟರಿ ಗದಗ ಸೆಂಟ್ರಲ್ ಹಾಗೂ ಐಡಿಬಿಐ ಬ್ಯಾಂಕ್ ಸಹಯೋಗದಲ್ಲಿ ಗದಗ ತಾಲೂಕಿನ ಯಲಿಶಿರೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೊಡುಗೆ ನೀಡಲಾಯಿತು.
ರೋಟರಿ ಗದಗ ರೆವಿನ್ಯೂ ಡಿಸ್ಟ್ರಿಕ್ಟ್ನ ಅಸಿಸ್ಟಂಟ್ ಗವರ್ನರ್ ವಿ.ಕೆ. ಗುರುಮಠ ಮತ್ತು ಮಾಜಿ ಅಸಿಸ್ಟಂಟ್ ಗವರ್ನರ್ ಎಂ.ಸಿ. ಐಲಿ ಮಾತನಾಡಿ, ರೋಟರಿ ಸಂಸ್ಥೆ ಸಾರ್ವಜನಿಕರಿಗಾಗಿ ಹಮ್ಮಿಕೊಂಡ ಮತ್ತು ಹಮ್ಮಿಕೊಳ್ಳುತ್ತಿರುವ ಸೇವಾ ಕಾರ್ಯಗಳ ಕುರಿತು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ತಿಳಿಸಿದರು.
ಐಡಿಬಿಐ ಬ್ಯಾಂಕ್ ಗದಗ ಶಾಖೆಯ ವ್ಯವಸ್ಥಾಪಕ ವಿಕ್ರಂ ಕಡೆಮನೆ ಮಾತನಾಡಿ, ತಮ್ಮ ಬ್ಯಾಂಕ್ ಕೂಡ ಸಾರ್ವಜನಿಕರ ಹಿತಕ್ಕೆ, ಸಾಮಾಜಿಕ ಕಾರ್ಯಗಳಿಗೆ ಸಹಕಾರ ನೀಡುತ್ತದೆ. 150 ಲೀಟರ್ ಸಾಮರ್ಥ್ಯದ ರೂ. 85 ಸಾವಿರಕ್ಕೆ ಒಂದು ಘಟಕದಂತೆ ಈ ಎರಡೂ ಶಾಲೆಗೆ 1 ಲಕ್ಷ 70 ಸಾವಿರ ರೂ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನೀಡಲಾಗಿದೆ ಎಂದರು.
ಬ್ಯಾಂಕಿನ ರೀಜನಲ್ ಆಫೀಸರ್ ರಮೇಶ್ ಅವರು ನೀರಿನ ಘಟಕಗಳನ್ನು ಉದ್ಘಾಟಿಸಿದರು. ರೋಟರಿ ಗದಗ ಸೆಂಟ್ರಲ್ ಅಧ್ಯಕ್ಷ ಚೇತನ್ ಅಂಗಡಿ ಮಾತನಾಡಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಎರಡೂ ಶಾಲೆಗಳಿಗೆ ಬ್ಯಾಂಕಿನವರ ಸಹಕಾರದೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನೀಡಿದ್ದೇವೆ. ನಮ್ಮ ಸಂಸ್ಥೆ ಮಕ್ಕಳಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು ಯಾವಾಗಲೂ ಸಿದ್ಧವಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯೆ ರಾಧಾ ಜಾಲರಡ್ಡಿ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಯಲಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯೆ ಪ್ರಗತಿ ಗುಡ್ಡದ, ಎಸ್ಡಿಎಂಸಿ ಅಧ್ಯಕ್ಷ ಎನ್.ಎಫ್. ಪಾಟೀಲ, ರೋಟರಿ ಸೆಂಟ್ರಲ್ ಕಾರ್ಯದರ್ಶಿ ರಾಜು ಉಮನಾಬಾದಿ, ಖಜಾಂಚಿ ಡಾ. ಪ್ರಭು ಗಂಜಿಹಾಳ, ಸುರೇಶ ಅಬ್ಬಿಗೇರಿ, ವಿಜಯ್ ಕುಮಾರ್ ಹಿರೇಮಠ, ಮಂಜುನಾಥ್ ಕಬಾಡಿ, ಹುಬ್ಬಳ್ಳಿ ರೆವಿನ್ಯೂ ಡಿಸ್ಟ್ರಿಕ್ಟ್ನ ಅಸಿಸ್ಟಂಟ್ ಗವರ್ನರ್ ಸುನೀಲ ಮಿರಜಕರ ಹಾಗೂ ರೋಟರಿ ಸದಸ್ಯರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.



