ಬೆಂಗಳೂರು: ಕರ್ನಾಟಕದಲ್ಲಿ ಕ್ರಿಮಿನಲ್‍ಗಳು, ಭಯೋತ್ಪಾದಕರಿಗೆ ರಾಜಾಶ್ರಯ ದೊರಕುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರೆಸಾರ್ಟ್‍ಗೆ ಹೋಗಬೇಕಾದ ಅವಶ್ಯಕತೆ ಇಲ್ಲ; ಜೈಲಿಗೆ ಹೋದರೆ ಸಾಕು. ನಿಮಗೆ ಗಾಂಜಾ, ಡ್ರಿಂಕ್ಸ್ (ದಾರೂ) ಸಿಗುತ್ತದೆ. ಬ್ಲೂಫಿಲಂ ನೋಡಬೇಕಾದರೆ ಅದೂ ಸಿಗುತ್ತದೆ. ಮೊಬೈಲ್‍ನಲ್ಲಿ ಮಾತನಾಡಲೂ ವ್ಯವಸ್ಥೆ ಇದೆ. ಇವರಿಗೆ ನಾಚಿಕೆ ಆಗಬೇಕಲ್ಲವೇ ಎಂದು ಆಕ್ಷೇಪಿಸಿದರು.
ಭಯೋತ್ಪಾದಕನ ಕೈಗೆ ಮೊಬೈಲ್ ಸಿಗುವುದಾದರೆ ದೇಶದ್ರೋಹದ ಚಟುವಟಿಕೆಗೆ ರಾಜಾಶ್ರಯ ನೀಡಿದಂತೆ ಅಲ್ಲವೇ ಎಂದು ಕೇಳಿದರು. ಉಮೇಶ್ ರೆಡ್ಡಿ ಎಂಬ ಅತ್ಯಾಚಾರಿ ಜೈಲಿನಲ್ಲಿ ಮೋಜು ಮಸ್ತಿ ಮಾಡಬಹುದಾದರೆ, ಜೈಲಿನಲ್ಲಿ ಕ್ರಿಮಿನಲ್‍ಗಳಿಗೆ ರಾಜಾಶ್ರಯ ಇದೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ಮಾದಕವಸ್ತು ಉತ್ಪಾದನಾ ಕಾರ್ಖಾನೆ ಆರಂಭವಾಗುತ್ತದೆ. ಕರ್ನಾಟಕದವರಿಗೆ ಮಾಹಿತಿಯೇ ಇಲ್ಲ; ಮಹಾರಾಷ್ಟ್ರ ಪೊಲೀಸರು ಬಂದು ಹಿಡಿಯುತ್ತಾರೆ. ಇದಕ್ಕೆ ರಾಜಾಶ್ರಯವೇ ಕಾರಣ ಎಂದು ದೂರಿದರು.
ರಾಜ್ಯದ ಜೈಲಿನ ಇಂಥ ಚಟುವಟಿಕೆಗಳ ಕುರಿತು ಎನ್‍ಐಎ, ಇಲ್ಲಿನ ಬೇಹುಗಾರಿಕಾ ದಳಕ್ಕೆ 4 ತಿಂಗಳ ಹಿಂದೆ ಎಚ್ಚರಿಕೆ ಕೊಟ್ಟಿತ್ತು. ಆದರೂ, ನಿರ್ಲಕ್ಷ್ಯ ವಹಿಸಿದ್ದಾರೆಂದರೆ ಅದು ನಿರ್ಲಕ್ಷ್ಯವಲ್ಲ; ಕೃಪೆ ಎಂದು ಟೀಕಿಸಿದರು. ಆ ಕೃಪೆಗೆ ಸಿಎಂ, ಗೃಹ ಸಚಿವರು ಹೊಣೆ ಹೊತ್ತುಕೊಳ್ಳಬೇಕು. ಆದ್ದರಿಂದ ಮುಖ್ಯಮಂತ್ರಿ, ಗೃಹ ಸಚಿವರಿಗೆ ಅಧಿಕಾರದಲ್ಲಿ ಇರುವ ನೈತಿಕತೆ ಇಲ್ಲ. ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.


