ಬೆಂಗಳೂರು: ಆರ್‌ಎಸ್‌ಎಸ್ ನವರು ಅತಿಯಾಗಿ ನಡೆದುಕೊಳ್ಳೋದು ನಿಲ್ಲಿಸಬೇಕು. ಅವರು ಹಿಂದಿನಂತೆ ಶಿಸ್ತಿನಿಂದ, ಗಡಿಬಿಡಿಯಿಲ್ಲದೆ ತಮ್ಮ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಪತ್ರದ ವಿಚಾರ ಮತ್ತು ಅವರಿಗೆ ಬಂದ ಬೆದರಿಕೆ ಕರೆ ಕುರಿತು ಮಾತನಾಡಿದ ಗೋಪಾಲಕೃಷ್ಣ, “ಆರ್‌ಎಸ್‌ಎಸ್ ಸಂಘಟನೆಯ ಮೇಲೆ ನಿಷೇಧ ಹಾಕಬೇಕು ಅನ್ನೋದು ಖರ್ಗೆ ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಆರ್‌ಎಸ್‌ಎಸ್ ನವರು ಬೆದರಿಕೆ ಹಾಕೋದು ಸರಿಯಲ್ಲ. ಎಲ್ಲ ಧರ್ಮಗಳನ್ನು ಒಟ್ಟಾಗಿ ಮುನ್ನಡೆಸೋದು ಸರ್ಕಾರದ ಜವಾಬ್ದಾರಿ. ಖರ್ಗೆ ಅವರು ಹೆದರಬೇಕಿಲ್ಲ. ನಮ್ಮದೇ ಸರ್ಕಾರ ಇದೆ, ಬೆದರಿಕೆ ಹಾಕೋವರಿಗೆ ಸರಿಯಾದ ಕ್ರಮ ತೆಗೆದುಕೊಳ್ಳಲಾಗುತ್ತದೆ,” ಎಂದರು.
“ಮುನ್ಸೂಚನೆಯಿಲ್ಲದೆ ಕಾರ್ಯಕ್ರಮ ನಡೆಸುವುದು ಸರಿಯಲ್ಲ. ಮೊದಲು ಆರ್‌ಎಸ್‌ಎಸ್ ನವರು ಪ್ಯಾಂಟ್-ಶರ್ಟ್ ಹಾಕಿಕೊಂಡು ಇದ್ದರು. ಈಗ ಬಿಜೆಪಿ ಜನರು ಕೂಡ ಹಾಗೇ ಮಾಡ್ತಿದ್ದಾರೆ. ಅವರು ಕಾರ್ಯಕ್ರಮ ನಡೆಸಬೇಕು ಅಂದ್ರೆ ಸರಿಯಾಗಿ ಅನುಮತಿ ತೆಗೆದುಕೊಳ್ಳಬೇಕು. ಅದು ತಪ್ಪೇನಲ್ಲ. ರಾಜಕೀಯ ಗೊಂದಲಗಳು ಇರುವುದು ಸಹಜ. ಆದರೆ ನಿಯಮಾನುಸಾರ ನಡೆಯೋದು ಮುಖ್ಯ,” ಎಂದರು.
ಸಚಿವ ಸ್ಥಾನ ಕುರಿತು ಅವರು ಮಾತನಾಡುತ್ತಾ, “ನಾನು ಸಚಿವ ಸ್ಥಾನದ ಆಸೆ ಹೊಂದಿದ್ದೇನೆ. ಸಂಪುಟ ವಿಸ್ತರಣೆ ಬಗ್ಗೆ ಉನ್ನತ ನಾಯಕರು ನಿರ್ಧಾರ ಮಾಡ್ತಾರೆ. ನಾನು ಮೂರು ಬಾರಿ ಶಾಸಕನಾಗಿದ್ದೇನೆ. ನಾನು ಗೊಂದಲವನ್ನೇನೂ ಮಾಡಲ್ಲ. ಸನ್ಯಾಸಿಯೂ ಅಲ್ಲ,” ಎಂದು ಸ್ಪಷ್ಟಪಡಿಸಿದರು