ವಿಜಯಸಾಕ್ಷಿ ಸುದ್ದಿ, ರೋಣ : ಶಾಲಾ ಮಕ್ಕಳ ಉನ್ನತಿಯೇ ಶಿಕ್ಷಕರ ವೃತ್ತಿಗೆ ತೃಪ್ತಿ ಎಂದು ಶಿಕ್ಷಕ ವೃತ್ತಿಯಿಂದ ನಿವೃತ್ತಿಕೊಂಡ ಆರ್.ಬಿ. ಪ್ರಭಣ್ಣವರ ಹೇಳಿದರು.
ಅವರು ಬುಧವಾರ ಮಾರನಬಸರಿ ಗ್ರಾಮದ ಸ.ಹಿ.ಪ್ರಾ. ಶಾಲೆಯ ಎಸ್‌ಡಿಎಂಸಿಯವರಿಂದ ಜರುಗಿದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾರನಬಸರಿ ಗ್ರಾಮದ ಶಾಲೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೂ ಕೂಡ ಹೆಸರು ಮಾಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ಗ್ರಾಮದಲ್ಲಿ ನಾನು 18 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದು ಹೆಮ್ಮೆಯ ಸಂಗತಿಯಾಗಿದೆ. ಗ್ರಾಮಸ್ಥರು ಕೂಡ ಶಿಕ್ಷಕರ ಬಗ್ಗೆ ಅತ್ಯಂತ ಕಳಕಳಿಯನ್ನು ಹೊಂದಿರುವುದು ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ ಎಂದರು.
ನಮ್ಮ ಕೈಯಲ್ಲಿ ಕಲಿತ ಮಕ್ಕಳು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಿದರೆ ಶಿಕ್ಷಕನಿಗೆ ಹೆಮ್ಮೆಯೆನಿಸುತ್ತದೆ. ಕಾರಣ, ಶಿಕ್ಷಕರು ವಿದ್ಯಾರ್ಥಿಯ ಏಳ್ಗೆಯನ್ನು ಬಯಸುತ್ತಾರೆ. ಪಾಲಕರು ಸಹ ಮಕ್ಕಳಿಗೆ ಅಕ್ಷರ ಜ್ಞಾನ ಕೊಡಿಸುವಲ್ಲಿ ಹಿಂದೇಟು ಹಾಕಬಾರದು ಎಂದ ಅವರು, ಸಮಯ ಸಿಕ್ಕಾಗ ಶಾಲೆಗೆ ಬಂದು ವಿದ್ಯಾರ್ಥಿಗಳೊಂದಿಗೆ ಬೆರೆಯುತ್ತೇನೆ ಎಂದರು. ಇದೇ ಸಂಧರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಾಲೆಯ ಶಿಕ್ಷಕರು ನಿವೃತ್ತಿ ಹೊಂದಿದ ಶಿಕ್ಷಕ ಆರ್.ಬಿ. ಪ್ರಭಣ್ಣವರರವರಿಗೆ ಸನ್ಮಾನಿಸಿ ಬೀಳ್ಕೊಟ್ಟರು.
ಎಸ್‌ಡಿಎಂಸಿ ಅಧ್ಯಕ್ಷ ಕೂಡ್ಲೇಪ್ಪ ಹಡಪದ, ಬಸವರಾಜ ಮಾರನಬಸರಿ, ಅಬ್ದುಲ್ ಗದಗ, ಬಸವರಾಜ ಕೊನಾಪೂರ, ಶರಣಪ್ಪ ತಳವಾರ, ಅಶೋಕ ತಳವಾರ, ಅನಿತಾ ಪತ್ತಾರ, ಕವಿತಾ ಹಿರೇಮಠ, ಶರಣಮ್ಮ ಡಂಬಳ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.