ವಿಜಯಸಾಕ್ಷಿ ಸುದ್ದಿ, ರೋಣ : ಪಟ್ಟಣದಲ್ಲಿರುವ ಗುರುಭವನದ ಮೇಲ್ಮಹಡಿ ನಿರ್ಮಾಣಕ್ಕೆ ಈಗಾಗಲೇ 20 ಲಕ್ಷ ರೂಗಳ ಅನುದಾನವನ್ನು ನೀಡಲಾಗಿದ್ದು, ಈಗ ಮತ್ತೆ 1 ಕೋಟಿ ರೂಗಳ ಅನುದಾನವನ್ನು ಒದಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಶನಿವಾರ ಎಸ್.ಆರ್. ಪಾಟೀಲ ಸರಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಸರಕಾರ ಹಾಗೂ ಅಜೀಂ ಪ್ರೇಮಜಿ ಫೌಂಡೇಶನ್ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗೆ ಶಾಲಾ ಅವಧಿಯ 6 ದಿನಗಳಲ್ಲಿಯೂ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಹಿಂದೆ ವಾರದಲ್ಲಿ ಎರಡು ದಿನ ಮಾತ್ರ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತಿತ್ತು. ಈಗ ಅಜೀಂ ಪ್ರೇಮ್‌ಜೀಯವರು ಯಾವ ಮಕ್ಕಳೂ ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಶಾಲಾ ಅವಧಿಯ 6 ದಿನಗಳು ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿಯನ್ನು ಸೇವಿಸಲಿ ಎಂದು ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಮಹತ್ವಪೂರ್ಣ ಕಾರ್ಯವನ್ನು ಜಾರಿಗೆ ತಂದಿರುವುದು ಸ್ವಾಗತರ್ಹವಾಗಿದೆ. ಮಕ್ಕಳು ಸಹ ಪೌಷ್ಟಿಕ ಆಹಾರವನ್ನು ಸೇವಿಸಿ ಗುಣಮಟ್ಟದ ಅಕ್ಷರ ಜ್ಞಾನವನ್ನು ಪಡೆಯಬೇಕು ಎಂದರು.
ಅಧ್ಯಕ್ಷತೆಯನ್ನು ಗದಿಗೇಪ್ಪ ಕಿರೇಸೂರ ವಹಿಸಿದ್ದರು. ಪುರಸಭೆಯ ಅಧ್ಯಕ್ಷೆ ಗೀತಾ ಮಾಡಲಗೇರಿ, ಸದಸ್ಯರಾದ ದಾವಲಸಾಬ ಬಾಡಿನ, ಸಂಗಪ್ಪ ಜಿಡ್ಡಿಬಾಗಿಲ, ರಂಗವ್ವ ಭಜಂತ್ರಿ, ವಿ.ಬಿ. ಸೋಮನಕಟ್ಟಿಮಠ, ಯೂಸುಪ್ ಇಟಗಿ,ಮುತ್ತಣ್ಣ ಸಂಗಳದ, ಬಸವರಾಜ ಜಗ್ಗಲ, ಅಸ್ಲಂ ಕೊಪ್ಪಳ, ಯಲ್ಲಪ್ಪ ಕಿರೇಸೂರ, ಬಿಇಒ ಆರ್.ಎನ್. ಹುರಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗುರುಗಳ ಹಿತವನ್ನು ಕಾಯುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಗುರುಗಳನ್ನು ಗೌರವಿಸಿದಾಗ ಮಾತ್ರ ಸಮಾಜದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಗುರುಭವನದ ಮೇಲ್ಮಹಡಿ ನಿರ್ಮಾಣಕ್ಕೆ 1 ಕೋಟಿ ರೂಗಳ ಅನುದಾನವನ್ನು ಒದಗಿಸಲಾಗಿದೆ. ಗುರುಗಳು ಸಹ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ವೃದ್ಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸರಕಾರಿ ಶಾಲೆಗಳ ಪ್ರಗತಿಗೆ ತಾವು ಎಲ್ಲ ರೀತಿಯಿಂದಲೂ ಸಹಕಾರ ನೀಡುವುದಾಗಿ ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.