ಬೆಂಗಳೂರು:- ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡದೇ ಇದ್ದರೆ ಜನವರಿ 4 ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದರು.
ಸಿಎಂ ಸಿದ್ದರಾಮಯ್ಯನವರು ಸಿಬಿಐ ತನಿಖೆಗೆ ಆದೇಶಿಸಿದರೆ ಒಳ್ಳೆಯದು. ಜನವರಿ 3 ರವರೆಗೂ ಕಾಯುತ್ತೇವೆ. ಸಿಬಿಐಗೆ ನೀಡದೇ ಇದ್ದರೆ ಜ.4 ರಂದು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಪಿ ರಾಜು ಕಪನೂರು ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಜತೆಗೂ ಇರುವ ಫೋಟೋ ರಿಲೀಸ್ ಮಾಡಿ, ಈತ ಖರ್ಗೆ ಕುಟುಂಬಕ್ಕೆ ಪರಮಾತ್ರ. ರಾಜೂನ ಸಿಎಂ, ಡಿಸಿಎಂ ತೊಡೆ ಮೇಲೆ ಕೂರಿಸಿಕೊಳ್ಳುವುದು ಬಾಕಿ. ಬಿಟ್ಟರೆ ತಲೆ ಮೇಲೂ ಕೂರಿಸಿಕೊಳ್ತಾರೆ. ಪ್ರಿಯಾಂಕ್ ಖರ್ಗೆ ತಮಗೆ ರಾಜು ಕಪನೂರು ಪರಿಚಯ ಇಲ್ಲ ಅಂತ ಹೇಳಲು ಸಾಧ್ಯವಿಲ್ಲ ಎಂದರು.
ಸಿದ್ದರಾಮಯ್ಯ ನಿಜವಾದ ಅಹಿಂದ ನಾಯಕ ಆಗಿದ್ದರೆ ಪ್ರಕರಣವನ್ನು ಸಿಬಿಐಗೆ ನೀಡಿ ಸಚಿನ್ ಕುಟುಂಬಕ್ಕೆ ನ್ಯಾಯ ಕೊಡಿಸಲಿ. ಆಗ ನಾವು ನಿಮ್ಮನ್ನು ಅಹಿಂದ ನಾಯಕ, ಬಲಿಷ್ಟ ಸಿಎಂ ಎಂದು ಒಪ್ಪಿಕೊಳ್ಳುತ್ತೇವೆ ಎಂದು ವಿಜಯೇಂದ್ರ ಸವಾಲ್ ಎಸೆದರು.