ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಪ್ತನಿಂದ ಕೊಲೆ ಬೆದರಿಕೆ ಆರೋಪ ಕೇಳಿಬಂದಿದ್ದು, ಬೀದರ್ನಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಈ ಘಟನೆ ರಾಜಕೀಯವಾಗಿ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಬಿಜೆಪಿ ನಾಯಕರು ನೀಡಿದ ದೂರಿನ ಅನ್ವಯ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಮತ್ತು ಗ್ಯಾಂಗ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಿಜೆಪಿ ನಾಯಕರ ಒತ್ತಡಕ್ಕೆ ಕೊನೆಗೂ ಮಣಿದಿರುವ ಕಲಬುರಗಿ ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ತಮ್ಮ ವಿರುದ್ಧ ಕೊಲೆ ಸಂಚು ಕೂಡಲಾಗಿದೆ ಎಂದು ಬಿಜೆಪಿ ನಾಯಕರು ದೂರು ನೀಡಿದ್ದರು. ಬಿಜೆಪಿ ನಾಯಕರು ನೀಡಿದ್ದ ದೂರನ್ನು ಪೊಲೀಸರು ಸ್ವೀಕರಿಸುತ್ತಿಲ್ಲ ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ್ದರು.
ಪೊಲೀಸರ ಹಾಗೂ ಬಿಜೆಪಿ ನಾಯಕರ ಮಧ್ಯೆ ವಾಕ್ಸಮರ ನಡೆದು, ಸ್ಟೇಷನ್ ಬಜಾರ್ ಠಾಣೆ ಎದುರು ಹೈಡ್ರಾಮವೇ ನಡೆದಿತ್ತು. ಇದೀಗ ರಾಜು ನಂದಕುಮಾರ್, ನಾಗಭುಜಂಗೆ ಸೇರಿದಂತೆ ಆರು ಜನರ ವಿರುದ್ಧ ಬಿಎನ್ಎಸ್ ಸೆಕ್ಷನ್ 351 (2) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಕೋರ್ಟ್ ಗಮನಕ್ಕೆ ತಂದ ಬಳಿಕವೇ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.