ವಿಜಯಸಾಕ್ಷಿ ಸುದ್ದಿ, ನರೇಗಲ್ : ನಮ್ಮ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಎಸ್.ವಿ. ನೇಗಲಿ ಗುರುಗಳು ತಮ್ಮ ಕಾರ್ಯ ತತ್ಪರತೆಯಲ್ಲಿ ನಿಪುಣರಾಗಿದ್ದರು. ಅವರ ಸೇವಾ ಅವಧಿಯಲ್ಲಿನ ಕಾರ್ಯ ತತ್ಪರತೆ ಎಂದಿಗೂ ಶ್ಲಾಘನೀಯ ಎಂದು ಹಾಲಕೆರೆ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ನಡೆದ ಎಸ್.ವಿ. ನೇಗಲಿ ಗುರುಗಳ 84ನೇ ಜಯಂತ್ಯುತ್ಸವ ಮತ್ತು `ಸಾಧನೆಯ ಸಿರಿ’ ಗ್ರಂಥ ಸಮರ್ಪಣೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಮ್ಮಲ್ಲಿನ ಒಳ ಪಂಗಡಗಳು ಎಷ್ಟೇ ಇರಲಿ, ಎಲ್ಲರೂ ಒಂದಾಗಿ ಬದುಕು ಸಾಗಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ. ಈ ದಿಶೆಯಲ್ಲಿ ಇಂದು ಇಲ್ಲಿ ಸಂಘಟನೆಗೊಂಡಿರುವ ಲಿಂಗಾಯತ ಪಂಚಮಸಾಲಿ ಸಂಘವು ತನ್ನ ಸಂಖ್ಯೆ ಎಷ್ಟು ಎಂಬುದನ್ನು ಮೊದಲು ಗಣತಿ ಮಾಡಲಿ ಎಂದು ಶ್ರೀಗಳು ತಿಳಿಸಿದರು.
ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಜಗದ್ಗುರುಗಳು ಆಶೀರ್ವಚನ ನೀಡಿ, ಪಂಚಮಸಾಲಿ ಸಮಾಜವನ್ನು ಕಟ್ಟಿ ಬೆಳೆಸುವಲ್ಲಿ ನೇಗಲಿ ಗುರುಗಳ ಶ್ರಮ ಅಪಾರವಾದುದು. ಕೇವಲ ಸಮಾಜ ಸಂಘಟನೆಯೊಂದನ್ನೇ ಗುರಿಯನ್ನಾಗಿಸಿಕೊಂಡು, ರಾಜಕೀಯದ ಗೋಜಿಗೆ ಹೋಗದೆ ದುಡಿದ ನೇಗಲಿ ಗುರುಗಳ ಶ್ರಮ ಮೂವತ್ತು ವರ್ಷಗಳ ನಂತರ ಸಾರ್ಥಕ ಎನ್ನಿಸಿದೆ ಎಂದರು.
ಧಾರವಾಡ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಶ್ರೀಗಳು, ಅಧ್ಯಕ್ಷತೆ ವಹಿಸಿದ್ದ ಡಾ. ಬಸವರಾಜ ದಿಂಡೂರ, ನಿವೃತ್ತ ಪ್ರಾಚಾರ್ಯ ಬಿ.ಎಫ್. ಚೇಗರೆಡ್ಡಿ, ಬಿ.ಎಸ್. ಶಿರೋಳ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ, ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ಬೆಂಗಳೂರು ಅಧ್ಯಕ್ಷ ಶಿವಕುಮಾರ ಮೇಟಿ, ವಸಂತಾ ಹುಲ್ಲತ್ತಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಸಂಘದ ರಾಜ್ಯಾಧ್ಯಕ್ಷ ಜಿ.ಪಿ. ಪಾಟೀಲ, ಉಪನ್ಯಾಸಕಿ ಶಕುಂತಲಾ ಸಿಂಧೂರ, ಎಸ್.ಎಚ್. ಪಾಟೀಲ, ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಭಾವಿ ಬೆಟ್ಟಪ್ಪ ಮಾತನಾಡಿದರು.
ಅನಸೂಯಾ ಆಲೂರ ಭರತನಾಟ್ಯ ಪ್ರದರ್ಶನ ನೀಡಿದರು. ವೇದಿಕೆಯ ಮೇಲೆ ನೇಗಲಿ ಗುರುಗಳ ಧರ್ಮಪತ್ನಿ ಶಿವಗಂಗವ್ವ ನೇಗಲಿ, ಪ್ರಕಾಶ ಪಾಟೀಲ, ಚಂದ್ರಶೇಖರ ದಿಂಡೂರ, ಎಸ್.ಎಸ್. ಪಾಟೀಲ, ಕಳಕನಗೌಡ ಮುಂತಾದವರಿದ್ದರು. ಆರ್.ಜಿ. ಚಿಕ್ಕಮಠ ಸಾಧನೆಯ ಸಿರಿ ಗ್ರಂಥವನ್ನು ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಶಿವಗಂಗವ್ವ ನೇಗಲಿಯವರನ್ನು ಸನ್ಮಾನಿಸಲಾಯಿತು.
ಮುತ್ತಣ್ಣ ನೇಗಲಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಸಂಗಣ್ಣ ಗದ್ದಿ ನಿರೂಪಿಸಿದರು. ಸೋಮಣ್ಣ ಡಾಣಗಲ್ಲ ಪ್ರಾಸ್ತಾವಿಕ ನುಡಿಗಳನ್ನಾಡಿದರು.